ಶ್ರೀನಗರ: ಕಳೆದ 7 ದಶಕಗಳಿಂದ ಜಮ್ಮು ಮತ್ತು ಕಾಶ್ಮೀರದ ವಿನಾಶಕ್ಕೆ ಕಾರಣವಾಗಿರುವವರು ಈ ಮೂರು ಕುಟುಂಬದ ರಾಜಕೀಯ ಪಕ್ಷಗಳು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ದಶಕಗಳ ಬಳಿಕ ಚುನಾವಣೆ ಎದುರಿಸುತ್ತಿರುವ ಜಮ್ಮು ಮತ್ತು ಕಾಶ್ಮೀರದ ಎರಡನೇ ಹಂತದ ಮತದಾನಕ್ಕೆ ಮುನ್ನ ಕಾಶ್ಮೀರದ ಶೇರಿ ಕಾಶ್ಮೀರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಅವರು ಬಿಜೆಪಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಅವರು ಮಾತನಾಡಿದರು.
ಈ ವೇಳೆ ಕಾಂಗ್ರೆಸ್, ಎನ್ಸಿ ಮತ್ತು ಪಿಡಿಪಿ ಪಕ್ಷದ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, ಈ ಮೂರು ಕುಟುಂಬಗಳು ಜಮ್ಮು ಮತ್ತು ಕಾಶ್ಮೀರ ಜನರ ಭವಿಷ್ಯವನ್ನು ನಾಶ ಮಾಡಿ, ರಾಜಕೀಯ ವೃತ್ತಿ ನಿರ್ಮಾಣ ಮಾಡಿಕೊಂಡಿವೆ. ಜಮ್ಮು ಮತ್ತು ಕಾಶ್ಮೀರದ ಅವನತಿಗೆ ಈ ಮೂರು ಕುಟುಂಬಗಳೇ ಜವಾಬ್ದಾರಿ ಎಂದು ನೇರಾ ನೇರ ಆರೋಪ ಮಾಡಿದರು.
ಅವರು, ಯಾರಾದರೂ ಹೇಗೆ ನಮ್ಮನ್ನು ಪ್ರಶ್ನಿಸಲು ಸಾಧ್ಯ ಎಂದು ಭಾವಿಸಿದ್ದರು. ಅವರು ಹೇಗಾದರೂ ಮಾಡಿ ಕುರ್ಚಿ ಪಡೆದು, ನಿಮ್ಮ ಜನ್ಮ ಹಕ್ಕನ್ನು ಕಸಿಯುವ ಮತ್ತು ಜನರ ಹಕ್ಕನ್ನು ಕಸಿಯುವುದು ತಮ್ಮ ರಾಜಕೀಯ ಹಕ್ಕು ಎಂದು ಭಾವಿಸಿದ್ದರು. ಅವರು ಜನರಿಗೆ ಕೇವಲ ಭಯ ಮತ್ತು ಅನಿಶ್ಚಿತತೆಯನ್ನೇ ಬಿತ್ತಿದರು. ಆದರೆ, ಇದೀಗ ಜನರು ಅವರ ಈ ಜಾಲಕ್ಕೆ ಬೀಳುವುದಿಲ್ಲ. ಇದೀಗ ಇಲ್ಲಿನ ಯುವಕರು ಅವರಿಗೇ ಚಾಲೇಂಜ್ ಮಾಡುತ್ತಿದ್ದಾರೆ ಎಂದು ಹೇಳಿದರು.