ಕೋಲ್ಕತ್ತಾ: ಕೋಲ್ಕತ್ತಾ ಪೊಲೀಸ್ ಇಲಾಖೆ ಹಾಗೂ ರಾಜ್ಯ ಆರೋಗ್ಯ ಇಲಾಖೆಯ ಉನ್ನತಾಧಿಕಾರಿಗಳ ವರ್ಗಾವಣೆಯೂ ಸೇರಿದಂತೆ ಪ್ರತಿಭಟನಾನಿರತ ವೈದ್ಯರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವುದಾಗಿ ಪಶ್ಚಿಮ ಬಂಗಾಳ ಮಮತಾ ಬ್ಯಾನರ್ಜಿ ಸೋಮವಾರ ಭರವಸೆ ನೀಡಿದ್ದಾರೆ.
ಮಂಗಳವಾರ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ಮುಗಿದ ಬಳಿಕ ನಾಲ್ಕು ಗಂಟೆಯ ಸುಮಾರಿಗೆ ನೂತನ ಪೊಲೀಸ್ ಆಯುಕ್ತರ ಹೆಸರನ್ನು ಘೋಷಿಸುವುದಾಗಿ ಅವರು ತಿಳಿಸಿದ್ದಾರೆ.
ಸೋಮವಾರ ತಡರಾತ್ರಿವರೆಗೂ ಕಾಳಿಘಾಟ್ನಲ್ಲಿರುವ ಸಿಎಂ ನಿವಾಸದಲ್ಲಿ ಪ್ರತಿಭಟನಾನಿರತ ವೈದ್ಯರ ಜೊತೆಗೆ ಸಿಎಂ ಮಮತಾ ಬ್ಯಾನರ್ಜಿ ಮಾತುಕತೆ ನಡೆಸಿದರು.
ಸೋಮವಾರ ನಡೆದ ಅಂತಿಮ ಸುತ್ತಿನ ಮಾತುಕತೆಯಲ್ಲಿ, ಪ್ರತಿಭಟನೆ ಅಂತ್ಯಗೊಳಿಸುವ ಸಂಬಂಧ 42 ವೈದ್ಯರ ನಿಯೋಗ ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಸಭೆಯ ನಡಾವಳಿಯ ನಿರ್ಧಾರಕ್ಕೆ ಸಹಿ ಹಾಕಿದೆ. ಈ ಮೂಲಕ 38 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯನ್ನು ಹಿಂಪಡೆಯಲು ವೈದ್ಯರು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
ವೈದ್ಯರ ನಿಯೋಗದೊಂದಿಗಿನ ಮಾತುಕತೆಯ ಬಳಿಕ ಮಾತನಾಡಿದ ಮಮತಾ ಬ್ಯಾನರ್ಜಿ, "ನಾವು ವೈದ್ಯರ ಎಲ್ಲ ಬೇಡಿಕೆಗಳನ್ನು ಸ್ವೀಕರಿಸಿದ್ದೇವೆ. ಸಾಮಾನ್ಯ ಜನರನ್ನು ಮನಸ್ಸಿನಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ವೈದ್ಯರು ಕರ್ತವ್ಯಕ್ಕೆ ಮರಳುವಂತೆ ಮನವಿ ಮಾಡುತ್ತೇನೆ. ಪ್ರತಿಭಟನಾನಿರತ ವೈದ್ಯರ ಮೇಲೆ ಯಾವುದೇ ಶಿಸ್ತು ಕ್ರಮ ಕೈಗೊಳ್ಳುವುದಿಲ್ಲ" ಎಂದು ಭರವಸೆ ನೀಡಿದರು.