ಜೈಪುರ: ಅಸ್ಪೃಶ್ಯತೆಯನ್ನು ನಾವು ಸಂಪೂರ್ಣವಾಗಿ ತೊಡೆದು ಹಾಕಬೇಕಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.ರಾಜಸ್ಥಾನದ ಆಳ್ವಾರ್ನಲ್ಲಿ ಭಾನುವಾರ ನಡೆದ ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, "ನಾವು ನಮ್ಮ ಧರ್ಮವನ್ನು ಮರೆತು ಸ್ವಾರ್ಥಕ್ಕೊಳಗಾದ ಹಿನ್ನೆಲೆಯಲ್ಲಿ ಅಸ್ಪೃಶ್ಯತೆ ಶುರುವಾಯಿತು. ಮೇಲು-ಕೀಳೆಂಬ ಭಾವವನ್ನು ಸಮಾಜದಿಂದ ಸಂಪೂರ್ಣವಾಗಿ ತೊಲಗಿಸಲೇಬೇಕಿದೆ. ಸಾಮಾಜಿಕ ಸಾಮರಸ್ಯದ ಮೂಲಕ ಈ ಬದಲಾವಣೆ ತರಬೇಕು" ಎಂದು ಕರೆ ಕೊಟ್ಟರು. "ಸಾಮಾಜಿಕ ಸಾಮರಸ್ಯ, ಪರಿಸರ, ಕೌಟುಂಬಿಕ ಮೌಲ್ಯಗಳು, ಸ್ವದೇಶಿ ಮತ್ತು ನಾಗರಿಕ ಕರ್ತವ್ಯ ಎಂಬ 5 ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸ್ವಯಂಸೇವಕರಿಗೆ ಭಾಗವತ್ ತಿಳಿಸಿದರು. ಸ್ವಯಂಸೇವಕರು ಇವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಸಮಾಜ ಅವರನ್ನು ಅನುಸರಿಸುತ್ತದೆ" ಎಂದರು.