ಜಮ್ಮು: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವಿನ ಗುಂಡಿನ ಚಕಮಕಿ ಮುಂದುವರಿದಿದ್ದು, ಕಿಶ್ತವಾರ್ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಕಿರಿಯ ಸೇನಾಧಿಕಾರಿ (junior commissioned officer) ಸೇರಿ ಇಬ್ಬರು ಭದ್ರತಾ ಪಡೆ ಸಿಬ್ಬಂದಿಗಳು ವೀರ ಮರಣ ಹೊಂದಿದ್ದು,ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅನಂತ್ನಾಗ್ ಜಿಲ್ಲೆಯ ಕಿಶ್ತವಾರ್ಗೆ ಸಂಪರ್ಕಿಸುವ ನೈದಘಮ್ ಪ್ರದೇಶದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆಗೆ ಇಳಿದಿದ್ದರು. ಈ ವೇಳೆ ಗುಂಡಿನ ಚಕಮಕಿ ನಡೆದಿದ್ದು, ನಾಲ್ವರು ಸೇನಾ ಸಿಬ್ಬಂದಿ ಗಾಯಗೊಂಡಿದ್ದರು. ಇದರಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸೇನಾಧಿಕಾರಿ ನೈಬ್ ಸುಬೇದಾರ್ ವಿಪುನ್ ಕುಮಾರ್ ಮತ್ತು ಯೋಧ ಅರವಿಂದ್ ಸಿಂಗ್ ಅವರು ವೀರ ಮರಣವನ್ನಪ್ಪಿದ್ದಾರೆ. ಮೃತರಲ್ಲಿ ಓರ್ವ ಗ್ರೇನೆಡ್ ಸ್ಫೋಟದಿಂದ ಮತ್ತೋರ್ವ ತಲೆಗೆ ಗುಂಡು ತಾಗಿದ್ದರಿಂದ ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಬ್ಬರು ಯೋಧರ ಸಾವನ್ನು ಸೇನೆ ದೃಢಪಡಿಸಿದ್ದು, 'ವೀರ ಮರಣ ಹೊಂದಿದ ಯೋಧರ ತ್ಯಾಗಕ್ಕೆ ಭದ್ರತಾ ಪಡೆ ವಂದನೆ ಸಲ್ಲಿಸುತ್ತದೆ. ಅವರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇವೆ' ಎಂದು ಸೇನೆ ಹೇಳಿದೆ.