ನ್ಯೂಯಾರ್ಕ್: ಪಾಕಿಸ್ಥಾನದ ಬ್ಯಾಲಿಸ್ಟಿಕ್ ಕ್ಷಿಪಣಿ ಯೋಜನೆಗೆ ಸಹಾಯ ಮಾಡಿದ್ದಕ್ಕಾಗಿ ಅಮೆರಿಕವು ಮೂರು ಚೀನೀ ಮತ್ತು ಒಂದು ಪಾಕಿಸ್ತಾನಿ ಕಂಪನಿ ಹಾಗೂ ಓರ್ವ ಚೀನಾದ ಪ್ರಜೆಯ ಮೇಲೆ ನಿರ್ಬಂಧಗಳನ್ನು ವಿಧಿಸಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಪ್ರಕಟಿಸಿದ್ದಾರೆ.
ಶಾಹೀನ್-3 ಮತ್ತು ಅಬಾಬೀಲ್ ಕ್ಷಿಪಣಿಗಳಲ್ಲಿ ಬಳಸಲಾಗುವ ದೊಡ್ಡ ವ್ಯಾಸದ ರಾಕೆಟ್ ಮೋಟರ್ಗಳನ್ನು ಪರೀಕ್ಷಿಸಲು ಅಗತ್ಯವಾದ ಉಪಕರಣಗಳನ್ನು ಪಡೆಯಲು ಪಾಕಿಸ್ಥಾನದ ರಾಷ್ಟ್ರೀಯ ಅಭಿವೃದ್ಧಿ ಸಂಕೀರ್ಣದೊಂದಿಗೆ ಕೆಲಸ ಮಾಡಿದ್ದಕ್ಕಾಗಿ ಬೀಜಿಂಗ್ ರಿಸರ್ಚ್ ಇನ್ ಸ್ಟಿಟ್ಯೂಟ್ ಆಫ್ ಆಟೋಮೇಷನ್ ಫಾರ್ ಮೆಷಿನ್ ಬಿಲ್ಡಿಂಗ್ ಇಂಡಸ್ಟ್ರಿ (ಆರ್ಐಎಎಂಬಿ) ಸಂಸ್ಥೆಯ ಮೇಲೆ ನಿರ್ಬಂಧ ವಿಧಿಸಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಚೀನಾದ ಪ್ರಜೆ ಲುವೊ ಡೊಂಗ್ಮೆ ಮತ್ತು ಪಾಕಿಸ್ಥಾನ ಮೂಲದ ಇನ್ನೋವೇಟಿವ್ ಇಕ್ವಿಪ್ ಮೆಂಟ್ ಕಂಪನಿಗೆ ಸಹ ಇದೇ ಕಾರಣಗಳಿಗಾಗಿ ನಿಷೇಧ ಹೇರಲಾಗಿದೆ ಎಂದು ಅವರು ಹೇಳಿದರು.
ಯುಎಸ್ ಪ್ರಕಾರ, ಎನ್ಡಿಸಿ ದೀರ್ಘ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಯಾರಿಸುತ್ತಿದೆ. ಆದರೆ ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳ ಪ್ರಸರಣ ಮತ್ತು ಅವುಗಳ ವಿತರಣಾ ಜಾಲಗಳನ್ನು ತಡೆಯಲು 2005 ರಿಂದ ಕಾರ್ಯನಿರ್ವಾಹಕ ಆದೇಶದ ಅಡಿಯಲ್ಲಿ ಆರ್ಐಎಎಂಬಿ ಮೇಲೆ ನಿರ್ಬಂಧ ವಿಧಿಸಲಾಗಿದೆ.
ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಆಡಳಿತ (ಎಂಟಿಸಿಆರ್) ಗುಂಪಿನ ಸದಸ್ಯನಲ್ಲದ ಪಾಕಿಸ್ತಾನಕ್ಕೆ ಉದ್ದೇಶಪೂರ್ವಕವಾಗಿ ಉಪಕರಣಗಳು ಮತ್ತು ತಂತ್ರಜ್ಞಾನವನ್ನು ವರ್ಗಾಯಿಸಿದಕ್ಕಾಗಿ ಚೀನಾ ಮೂಲದ ಹುಬೈ ಹುವಾಚಾಂಗ್ಡಾ ಇಂಟೆಲಿಜೆಂಟ್ ಎಕ್ವಿಪ್ ಮೆಂಟ್ ಕಂಪನಿ, ಯುನಿವರ್ಸಲ್ ಎಂಟರ್ ಪ್ರೈಸ್ ಲಿಮಿಟೆಡ್ ಮತ್ತು ಕ್ಸಿಯಾನ್ ಲಾಂಗ್ಡೆ ಟೆಕ್ನಾಲಜಿ ಡೆವಲಪ್ ಮೆಂಟ್ ಕಂಪನಿ ಲಿಮಿಟೆಡ್ (ಲೋಂಟೆಕ್ ಎಂದೂ ಕರೆಯಲಾಗುತ್ತದೆ) ಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ ಎಂದು ಮಿಲ್ಲರ್ ಹೇಳಿದರು. ಭಾರತ ಸೇರಿದಂತೆ ಎಂಟಿಸಿಆರ್ನ 35 ಸದಸ್ಯ ರಾಷ್ಟ್ರಗಳು ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣವನ್ನು ತಡೆಯಲು ಕೆಲಸ ಮಾಡುತ್ತಿವೆ ಎಂಬುದು ಗಮನಾರ್ಹ.
.