image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆರ್​ಜಿ ಕರ್​ ಅತ್ಯಾಚಾರ, ಕೊಲೆ ಘಟನೆ: ನ್ಯಾಯ ಕೊಡಿಸುವಂತೆ ರಾಷ್ಟ್ರಪತಿ ಮುರ್ಮುಗೆ ವೈದ್ಯರ ಮೊರೆ

ಆರ್​ಜಿ ಕರ್​ ಅತ್ಯಾಚಾರ, ಕೊಲೆ ಘಟನೆ: ನ್ಯಾಯ ಕೊಡಿಸುವಂತೆ ರಾಷ್ಟ್ರಪತಿ ಮುರ್ಮುಗೆ ವೈದ್ಯರ ಮೊರೆ

ಕೋಲ್ಕತಾ,: ಕೋಲ್ಕತಾದ ಆರ್​ಜಿ ಕರ್​ ವೈದ್ಯಕೀಯ ಕಾಲೇಜಿನಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಘಟನೆ ಖಂಡಿಸಿ ಪಶ್ಚಿಮ ಬಂಗಾಳದಾದ್ಯಂತ ಮುಷ್ಕರ ನಡೆಸುತ್ತಿರುವ ಕಿರಿಯ ವೈದ್ಯರು, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮಧ್ಯ ಪ್ರವೇಶಿಸುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಶುಕ್ರವಾರ ಮನವಿ ರವಾನಿಸಿದ್ದಾರೆ. ರಾಜ್ಯದ ಎಲ್ಲ ಕಿರಿಯ ವೈದ್ಯರು ಪಶ್ಚಿಮ ಬಂಗಾಳ ಕಿರಿಯ ವೈದ್ಯರ ವೇದಿಕೆ (ಡಬ್ಲ್ಯುಬಿಜೆಡಿಎಫ್) ಅಡಿ ಒಂದಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. "ಅಪರಾಧದ ಭೀಕರ ಸ್ವರೂಪ, ಅದನ್ನು ಮುಚ್ಚಿಹಾಕುವ ಪ್ರಯತ್ನಗಳು ಮತ್ತು ಭಯದ ವಾತಾವರಣ ನಿರ್ಮಾಣವಾಗಿರುವ ಮಧ್ಯೆ ನಿಷ್ಪಕ್ಷಪಾತವಾಗಿ ಪ್ರಕರಣದ ತನಿಖೆ ನಡೆಯಬೇಕೆಂದು ಇಡೀ ರಾಷ್ಟ್ರವೇ ಒತ್ತಾಯಿಸುತ್ತಿದೆ" ಎಂದು ವೈದ್ಯರ ವೇದಿಕೆಯು ರಾಷ್ಟ್ರಪತಿಗಳಿಗೆ ರವಾನಿಸಿದ ಇಮೇಲ್​ನಲ್ಲಿ ತಿಳಿಸಲಾಗಿದೆ. ಉಪರಾಷ್ಟ್ರಪತಿ ಜಗದೀಪ್ ಧಂಕರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡಾ ಅವರಿಗೂ ಈ ಇಮೇಲ್​ನ ಪ್ರತಿಯನ್ನು ಕಳುಹಿಸಲಾಗಿದ್ದು, ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಾಕ್ಷ್ಯಗಳನ್ನು ತಿರುಚಲಾಗಿರುವ ಬಗ್ಗೆ ಕೆಲ ಉದಾಹರಣೆಗಳನ್ನು ಇಮೇಲ್​ನಲ್ಲಿ ಪ್ರಸ್ತಾಪಿಸಲಾಗಿದ್ದು, ಬಂಗಾಳದ ವೈದ್ಯಕೀಯ ಕ್ಷೇತ್ರ ಮತ್ತು ವೈದ್ಯಕೀಯ ಶಿಕ್ಷಣ ವ್ಯವಸ್ಥೆಯಲ್ಲಿ ವ್ಯಾಪಕವಾಗಿ ಬೇರೂರಿರುವ ಭ್ರಷ್ಟಾಚಾರದ ಬಗ್ಗೆ ಇಮೇಲ್​ನಲ್ಲಿ ಮಾಹಿತಿ ನೀಡಲಾಗಿದೆ.

"ಇಂಥ ಭಯದ ವಾತಾವರಣದಲ್ಲಿ ನಾವು ಆಡಳಿತದ ಬಗ್ಗೆ ಅಪನಂಬಿಕೆ ಹೊಂದಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಸುರಕ್ಷತೆಯ ವಾತಾವರಣ ಮೂಡಿಸಲು ಆಳವಾಗಿ ಬೇರುಬಿಟ್ಟಿರುವ ದುಷ್ಟ ಶಕ್ತಿಗಳನ್ನು ನಿರ್ಮೂಲನೆ ಮಾಡುವುದು ಅಗತ್ಯ" ಎಂದು ಇಮೇಲ್​ನಲ್ಲಿ ಬರೆಯಲಾಗಿದೆ.

Category
ಕರಾವಳಿ ತರಂಗಿಣಿ