ಶಿಮ್ಲಾ: ಹಿಮಾಚಲದಲ್ಲಿ ಸುಖ್ವಿಂದರ್ ಸಿಂಗ್ ಸುಖು ನೇತೃತ್ವದ ಕಾಂಗ್ರೆಸ್ ಸರ್ಕಾರ ಗಂಭೀರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ರಾಜ್ಯದ ಆರ್ಥಿಕ ಹೊರೆ ಸರಿದೂಗಿಸಲು ಅದು ಸಾಲದ ಮೊರೆ ಹೋಗಿದೆ. ಇತ್ತೀಚೆಗೆ ರಾಜ್ಯ ಸರ್ಕಾರ 700 ಕೋಟಿ ಸಾಲದ ಅಧಿಸೂಚನೆ ಹೊರಡಿಸಿತ್ತು. ಇದೀಗ ಬುಧವಾರ ರಾತ್ರಿ ಸಾಲದ ಮೊತ್ತ ಸರಕಾರದ ಖಜಾನೆಗೆ ಬಂದಿದೆ.
ಭಾರತ ಸರ್ಕಾರದಿಂದ ಕೇಂದ್ರ ತೆರಿಗೆಯಲ್ಲಿ ಸರ್ಕಾರವು ತನ್ನ ಪಾಲಿನ 740 ಕೋಟಿ ರೂಪಾಯಿಗಳನ್ನು ಪಡೆದಿದ್ದರೂ, ಇದು ಸುಖವಿಂದರ್ ಸರ್ಕಾರದ ಟೆನ್ಸನ್ ಕಡಿಮೆ ಮಾಡಿಲ್ಲ. ಕಾರಣ ಮುಂದಿನ ತಿಂಗಳು ಸರ್ಕಾರಕ್ಕೆ ನೌಕರರ ವೇತನಕ್ಕೆ 1200 ಕೋಟಿ, ಪಿಂಚಣಿದಾರರಿಗೆ 800 ಕೋಟಿ ಬೇಕಿದೆ. ಅಂದರೆ, ಮೊದಲನೇ ತಾರೀಖಿನಂದು ಇವರಿಗೆಲ್ಲ ಕೊಡಲು ರಾಜ್ಯ ಸರ್ಕಾರ 2000 ಕೋಟಿ ಸಂಗ್ರಹಿಸಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಹೇಗಾದರೂ ಮಾಡಿ ಒಂದನೇ ತಾರೀಖಿನಂದು ವೇತನ, ಪಿಂಚಣಿ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಸಿಎಂ ಸುಖವಿಂದರ್ ಸಿಂಗ್ ಸುಖು ಅವರು ರಾಜ್ಯ ಸರ್ಕಾರ ಮೊದಲನೇ ತಾರೀಖಿನಂದು ಸಂಬಳ/ಪಿಂಚಣಿ ನೀಡಲು ಪ್ರಯತ್ನಿಸುತ್ತದೆ ಎಂದು ಹೇಳಿದ್ದರು. ಆದರೆ, ಖಜಾನೆಯ ಆರೋಗ್ಯವನ್ನು ನೋಡಿದರೆ ಇದು ಸಂಭವಿಸುವ ಸಾಧ್ಯತೆಯಿಲ್ಲ ಎಂದು ತೋರುತ್ತದೆ.
ಹಿಮಾಚಲ ಪ್ರದೇಶದಲ್ಲಿ ಈ ಹಣಕಾಸು ವರ್ಷದಲ್ಲಿ ಡಿಸೆಂಬರ್ 2024 ರವರೆಗೆ ರಾಜ್ಯ ಸರ್ಕಾರದ ಸಾಲದ ಮಿತಿ 6,317 ಕೋಟಿ ರೂ. ಈ ಪೈಕಿ 700 ಕೋಟಿ ಸೇರಿದಂತೆ ಒಟ್ಟು 4,700 ಕೋಟಿ ಸಾಲವನ್ನು ರಾಜ್ಯ ಸರಕಾರ ತೆಗೆದುಕೊಂಡಿದೆ. ಈಗ ಸರ್ಕಾರದ ಬಳಿ ಒಟ್ಟು 1617 ಕೋಟಿ ರೂ. ಹಣವಿದೆ. ಇದೇ ಹಣದಲ್ಲಿ ಸರ್ಕಾರ ಡಿಸೆಂಬರ್ ವರೆಗೆ ಸಮಯ ಕಳೆಯಬೇಕಾಗುತ್ತದೆ. ರಾಜ್ಯವು ಐದನೇ ದಿನದಂದು ಕೇಂದ್ರದಿಂದ 520 ಕೋಟಿ ರೂ.ಅನುದಾನ ಪಡೆಯುತ್ತಿದೆ. ಹತ್ತನೇ ದಿನಕ್ಕೆ ಕೇಂದ್ರದ ತೆರಿಗೆಯಲ್ಲಿ 740 ಕೋಟಿ ರೂ. ಪಡೆಯಲದೆ. ಈ ಮೊತ್ತವನ್ನು ಸೇರಿಸಿದರೆ, ಉದ್ಯೋಗಿಗಳ ಸಂಬಳವನ್ನ ಮಾತ್ರವೇ ನೀಡಬಹುದು ಎನ್ನಲಾಗಿದೆ.