ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂ ಸವಾರಿಯ ದಿನ ನಾಡ ಅಧಿದೇವತೆಗೆ ಪುಷ್ಪಾರ್ಚನೆ ಮಾಡುವ ಸಂದರ್ಭದಲ್ಲಿ ಹಾರಿಸುವ 21 ಕುಶಾಲತೋಪು ಸಿಡಿಸುವ ಫಿರಂಗಿಗಳ ತಾಲೀಮಿಗೂ ಮುನ್ನ ಇಂದು ಅರಮನೆಯ ಆನೆ ಬಾಗಿಲಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಾಡ ಹಬ್ಬದ ಸಿದ್ಧತೆಗಳು ಅರಮನೆಯ ನಗರಿಯಲ್ಲಿ ಭರ್ಜರಿಯಾಗಿ ನಡೆಯುತ್ತಿವೆ. ಇದರ ಜತೆ ಅರಮನೆಗೆ ಆಗಮಿಸಿರುವ ಅಭಿಮನ್ಯು ನೇತೃತ್ವದ 14 ಗಜಪಡೆಗಳು ವಿವಿಧ ತಾಲೀಮಿನಲ್ಲಿ ಭಾಗವಹಿಸುತ್ತಿವೆ. ಜೊತೆಗೆ ದಸರಾದ ಕಾಮಗಾರಿಗಳು ಸಹ ಆರಂಭಗೊಂಡಿದ್ದು, ಇಂದು ಅಂಬಾವಿಲಾಸ ಅರಮನೆಯ ಆನೆ ಬಾಗಿಲಿನಲ್ಲಿ ಇರುವ ಫಿರಂಗಿಗಳಿಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಲಾಯಿತು.
ಜಂಬೂ ಸವಾರಿಯ ದಿನದಂದು ಚಿನ್ನದ ಅಂಬಾರಿಯಲ್ಲಿ ಇರುವ ನಾಡ ಅಧಿದೇವತೆ ಚಾಮುಂಡಿ ತಾಯಿಗೆ ಪುಷ್ಪಾರ್ಚನೆ ಮಾಡುವ ಸಂದರ್ಭದಲ್ಲಿ ಫಿರಂಗಿಗಳ ಮೂಲಕ 21 ಕುಶಾಲತೋಪು ಸಿಡಿಸಲಾಗುತ್ತದೆ. ಅರಮನೆಯ ಪಕ್ಕದ ಮಾರಮ್ಮ ದೇವಾಲಯದ ಪಕ್ಕದಲ್ಲಿರುವ ಪಾರ್ಕಿಂಗ್ ಪ್ರದೇಶದಲ್ಲಿ ಈ ಆಚರಣೆ ನಡೆಯುತ್ತದೆ. ಜೊತೆಗೆ ಗಜಪಡೆಯು ಜನರ ಶಬ್ಧಕ್ಕೆ ಹೆದರದಂತೆ ದಸರಾ ಸಮಯದಲ್ಲಿ ಮೂರು ಬಾರಿ ವಸ್ತು ಪ್ರದರ್ಶನದ ಆವರಣದಲ್ಲಿ ಗಜಪಡೆಗೆ ಸಿಡಿಮದ್ದು ತಾಲೀಮು ಕೈಗೊಳ್ಳಲು ಈ ಫಿರಂಗಿಗಳನ್ನು ಉಪಯೋಗಿಸಲಾಗುತ್ತದೆ. ಅಲ್ಲದೆ, ಪ್ರತಿನಿತ್ಯ ಅರಮನೆಯ ಒಳಗೆ ಸಿಬ್ಬಂದಿ ತಾಲೀಮು ನಡೆಸುತ್ತಾರೆ.