ನ್ಯೂಯಾರ್ಕ್: ಜಗತ್ತಿನಲ್ಲಿ ಮೂರನೇ ವಿಶ್ವ ಯುದ್ಧ ನಡೆಯುವ ಮತ್ತು ಪರಮಾಣು ಶಸ್ತ್ರಾಸ್ತ್ರಗಳು ಬಳಕೆಯಾಗುವ ಅಪಾಯವಿದ್ದು, ಅದನ್ನು ತಾನು ಮಾತ್ರ ತಡೆಯಬಲ್ಲೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ.
"ವಿಶ್ವವು ಮೂರನೇ ಮಹಾಯುದ್ಧದತ್ತ ಸಾಗುತ್ತಿದೆ. ಶಸ್ತ್ರಾಸ್ತ್ರಗಳ ಬಲ ಇದಕ್ಕೆ ಕಾರಣವಾಗಿದೆ. ಅದರಲ್ಲೂ ಪರಮಾಣು ಶಸ್ತ್ರಾಸ್ತ್ರಗಳು ಹೆಚ್ಚಿನ ಅಪಾಯ ತರಬಹುದು." ಎಂದು ಅವರು ಬುಧವಾರ ಹೇಳಿದರು. ಅಮೆರಿಕದ ಬತ್ತಳಿಕೆಯಲ್ಲಿ ಪರಮಾಣು ಬಾಂಬ್ಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಬಯಸುವುದಿಲ್ಲ ಎಂದು ಅವರು ತಿಳಿಸಿದರು.
"ನಿಮ್ಮನ್ನು ಯುದ್ಧದಿಂದ ಪಾರು ಮಾಡುವ ಅಧ್ಯಕ್ಷರ ಅಗತ್ಯವಿದೆ. ನಾನು ಆಯ್ಕೆಯಾದರೆ ವಿಶ್ವದಲ್ಲಿ ಮೂರನೇ ಮಹಾಯುದ್ಧ ನಡೆಯಲಾರದು. ಆದರೆ ಈಗ ನೀವು ಹೊಂದಿರುವ ಕೋಡಂಗಿ ನಾಯಕರ ಕಾರಣದಿಂದ ಮೂರನೇ ಮಹಾಯುದ್ಧ ನಡೆಯುವ ಸಾಧ್ಯತೆಯಿದೆ. ಆದರೆ ಈ ಯುದ್ಧ ಈ ಹಿಂದಿನ ಎಲ್ಲ ಯುದ್ಧಗಳಿಗಿಂತ ಭೀಕರವಾಗಿರಬಹುದು" ಎಂದು ಅವರು ಹೇಳಿದರು.
ಪೆನ್ಸಿಲ್ವೇನಿಯಾದ ಹ್ಯಾರಿಸ್ಬರ್ಗ್ನಲ್ಲಿ ಕನ್ಸರ್ವೇಟಿವ್ ಫಾಕ್ಸ್ ನ್ಯೂಸ್ ಪ್ರಸಾರಕ ಸೀನ್ ಹ್ಯಾನಿಟಿ ಆಯೋಜಿಸಿದ್ದ ಟೌನ್ ಹಾಲ್ ಸಭೆಯಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಈವೆಂಟ್ನ ಎರಡು ವಿಭಾಗಗಳಲ್ಲಿ ಮೊದಲನೆಯದನ್ನು ಬುಧವಾರ ರಾತ್ರಿ ಚಾನೆಲ್ನಲ್ಲಿ ಪ್ರಸಾರ ಮಾಡಲಾಯಿತು.
ತಮ್ಮ ಹೇಳಿಕೆಯನ್ನು ಬೆಂಬಲಿಸಲು ಟ್ರಂಪ್ ಹಂಗೇರಿಯ ಪ್ರಧಾನಿ ವಿಕ್ಟರ್ ಒರ್ಬಾನ್ ಅವರ ಹೇಳಿಕೆಯೊಂದನ್ನು ಉಲ್ಲೇಖಿಸಿದ್ದಾರೆ.