ಜಮ್ಮು: ಪವಿತ್ರ ಅಮರನಾಥ ಗುಹಾ ದೇವಾಲಯದಲ್ಲಿ ಹಿಮಲಿಂಗದ ದರ್ಶನ ಪಡೆಯುವ ವಾರ್ಷಿಕ ಯಾತ್ರೆಗೆ ಮೊದಲ ಹಂತದಲ್ಲಿ 5,880 ಯಾತ್ರಿಗಳು ಜಮ್ಮುವಿನಿಂದ ಪ್ರಯಾಣ ಬೆಳೆಸಿದ್ದಾರೆ.38 ದಿನಗಳ ಕಾಲ ಸಾಗುವ ಈ ಯಾತ್ರೆಗೆ 3,880 ಮೀಟರ್ ಎತ್ತರದ ದೇಗುಲಕ್ಕೆ ತೆರಳಲು ಯಾತ್ರಿಕರು ಎರಡು ಮಾರ್ಗಗಳ ಮೂಲಕ ತೆರಳಬಹುದಾಗಿದೆ. ಅದರಲ್ಲಿ ಸಾಂಪ್ರದಾಯಿಕ ಮಾರ್ಗವಾಗಿರುವ ಅನಂತ್ನಾಗ್ ಜಿಲ್ಲೆಯಲ್ಲಿನ 48 ಕಿ.ಮೀ ದೂರದ ನುನ್ವಾನ್-ಪಹಲ್ಗಾಮ್ ಮಾರ್ಗವಾದರೆ, ಎರಡನೆಯದು 14 ಕಿ.ಮೀ ದೂರದ ಗಂಡೇರ್ಬಲ್ ಜಿಲ್ಲೆಯ ಕಡಿದಾದ ಬಾಲ್ಟಾಲ್ ಮಾರ್ಗವಾಗಿದೆ. ಈ ಯಾತ್ರ ಸ್ಥಳಕ್ಕೆ ತೆರಳುವ ಸಾವಿರಾರು ಯಾತ್ರಾರ್ಥಿಗಳ ಪ್ರಮುಖ ಮಾರ್ಗ ಜಮ್ಮು ಮತ್ತು ಕಾಶ್ಮೀರದ ಹೆದ್ದಾರಿಯಾಗಿದೆ.ಮೊದಲ ಬ್ಯಾಚ್ನಲ್ಲಿ ಯಾತ್ರಾರ್ಥಿಗಳ ಪ್ರಯಾಣಕ್ಕೆ ಇಂದು ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅಧಿಕೃತವಾದ ಚಾಲನೆ ನೀಡಿದರು. ಮೊದಲ ಬ್ಯಾಚ್ನಲ್ಲಿ 1,115 ಮಹಿಳೆಯರು, 31 ಮಕ್ಕಳು ಹಾಗೂ 16 ತೃತೀಯ ಲಿಂಗಿಗಳು ಸೇರಿದಂತೆ 5,892 ಯಾತ್ರಿಗಳು ಮುಂಜಾನೆ 4.30ಕ್ಕೆ ಬೇಸ್ ಕ್ಯಾಂಪ್ನಿಂದ ಪ್ರಯಾಣ ಆರಂಭಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಯಾತ್ರೆಗೆ 3.31 ಲಕ್ಷ ಜನರು ಈ ಬಾರಿ ನೋಂದಣಿ ಮಾಡಿಸಿದ್ದು, ಆಗಸ್ಟ್ 9 ರಂದು ಯಾತ್ರೆ ಮುಗಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಬಿಗಿ ಭದ್ರತೆಯಲ್ಲಿ ಭಗವತಿ ನಗರ್ ಬೇಸ್ ಕ್ಯಾಂಪ್ಗೆ ಬಂದು ಪೂಜೆ ಸಲ್ಲಿಸುವ ಮೂಲಕ ಎರಡು ಬೇಸ್ ಕ್ಯಾಂಪ್ಗಳ ಯಾತ್ರೆಗೆ ಚಾಲನೆ ನೀಡಿದರು. ಈ ವೇಳೆ ಲೆಫ್ಟಿನೆಂಟ್ ಗವರ್ನರ್ ಜೊತೆಯಲ್ಲಿ ಸ್ಥಳೀಯ ಶಾಸಕರು, ಉನ್ನತ ಅಧಿಕಾರಿಗಳು ಹಾಗೂ ವಿವಿಧ ಧಾರ್ಮಿಕ ಸಂಘಟನೆ ಮುಖ್ಯಸ್ಥರು ಹಾಜರಿದ್ದರು.ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಜಮ್ಮು ಸಿಟಿಯಲ್ಲಿ ಇಂದು ಒಂದು ದೊಡ್ಡ ಹಬ್ಬ ನಡೆಯುತ್ತಿರುವಂತೆ ಭಾಸವಾಗುತ್ತಿದೆ. ಉತ್ಸಾಹಭರಿತರಾಗಿದ್ದ ಯಾತ್ರಿಕರು ಅಮರನಾಥ ಯಾತ್ರೆಗೆ ಮುಂದಾಗಿದ್ದಾರೆ. ಜನರು ಎಲ್ಲಾ ಭಯೋತ್ಪಾದಕ ಬೆದರಿಕೆಗಳನ್ನು ಧಿಕ್ಕರಿಸಿ ಶಿವಲಿಂಗ ದರ್ಶನಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇಂದು ಭಗವತಿ ನಗರ್ ಬೇಸ್ ಕ್ಯಾಂಪ್ನಿಂದ ಮೊದಲ ಬ್ಯಾಚ್ ಯಾತ್ರೆಗೆ ಚಾಲನೆ ನೀಡಲಾಯಿತು. ಶಿವ ಎಲ್ಲರಿಗೂ ಶಾಂತಿ ಮತ್ತು ಆಶೀರ್ವಾದ ನೀಡಲಿ ಎಂದು ಹಾರೈಸಿದ್ದಾರೆ.