ಅಮೆರಿಕ: ಕ್ರಾಂತಿಕಾರಿ ಬದಲಾವಣೆಗಳುಳ್ಳ 'ಒನ್ ಬಿಗ್ ಬ್ಯೂಟಿಫುಲ್ ಬಿಲ್' ತೀವ್ರ ಚರ್ಚೆಯ ಬಳಿಕ ಅಮೆರಿಕದ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ದೇಶದ ಹಲವು ಕ್ಷೇತ್ರಗಳಲ್ಲಿ ಮಹತ್ತರ ಬದಲಾವಣೆ ತರಲಿರುವ ಈ ಮಸೂದೆ, ಭಾರತದ ಮೇಲೂ ಪರಿಣಾಮ ಉಂಟು ಮಾಡಲಿದೆ. ತೆರಿಗೆ, ವಲಸೆ ನೀತಿ, ವೇತನ, ಗಡಿ ಭದ್ರತೆ, ಮಿಲಿಟರಿ, ಮೆಡಿಕ್ ಏಡ್, ಮೆಡಿಕೇರ್, ಸಾಮಾಜಿಕ ಭದ್ರತೆಯಂತಹ ಹಲವು ಕ್ಷೇತ್ರಗಳಲ್ಲಿ ಬದಲಾವಣೆ ತರಲಿರುವ ಈ ಮಸೂದೆಗೆ ತೀವ್ರ ವಿರೋಧ ಮತ್ತು ಪರ ಕೇಳಿ ಬಂದಿತ್ತು. ಕೆಳಮನೆಯಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ನಲ್ಲಿ ತಾತ್ಕಾಲಿಕ ಅಂಗೀಕಾರವಾಗಿದ್ದ ಮಸೂದೆಯು ಮೇಲ್ಮನೆಯಾದ ಸೆನೆಟ್ನಲ್ಲಿ ಪಾಸ್ ಆಗಲು ಭಾರೀ ಕಸರತ್ತು ನಡೆಸಿತು.
ಸತತ 27 ಗಂಟೆಗಳ ಕಾಲ ನಡೆದ ಚರ್ಚೆಯ ಬಳಿಕ ನಡೆದ ಮತದಾನದಲ್ಲಿ 50 - 50 ವೋಟ್ಗಳು ಬಂದವು. ಈ ವೇಳೆ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಟೈ-ಬ್ರೇಕಿಂಗ್ ಮತವನ್ನು , ಮಸೂದೆಯ ಪರ ಚಲಾಯಿಸಿದರು. ಇದರಿಂದ ಸದನದಲ್ಲಿ ಮಸೂದೆಯು 50-51 ರಲ್ಲಿ ಪಾಸ್ ಆಯಿತು. ಮಸೂದೆಯು ಮತ್ತೆ ಹೌಸ್ ಆಫ್ ರೆಪ್ರೆಸೆಂಟೇಟಿವ್ (ಕೆಳಮನೆ)ನಲ್ಲಿ ಚರ್ಚೆಗೆ ಬರಲಿದೆ. ಸೆನೆಟ್ ನಲ್ಲಿ ಮಸೂದೆ ಅಂಗೀಕಾರವಾಗಿದ್ದನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೊಂದು ಪ್ರಮುಖ ನೀತಿಯ ಗೆಲುವು ಎಂದು ಬಣ್ಣಿಸಿರುವ ಅವರು, ಈ ಶಾಸನದಿಂದ ದೇಶದ ಜನರು ದೊಡ್ಡ ಲಾಭ ಪಡೆಯಲಿದ್ದಾರೆ ಎಂದು ಹೇಳಿದ್ದಾರೆ.
ಅಮೆರಿಕದ ಸ್ವಾತಂತ್ರ್ಯ ದಿನವಾದ ಜುಲೈ 4 ರೊಳಗೆ ಎರಡೂ ಸದನಗಳಲ್ಲಿ ಮಸೂದೆ ಅಂಗೀಕಾರ ಪಡೆದುಕೊಂಡು ಜಾರಿಗೆ ತರಬೇಕು ಎಂಬುದು ಅಧ್ಯಕ್ಷರ ಆಶಯವಾಗಿದೆ. ಆದರೆ, ಆರೋಗ್ಯ ಮತ್ತು ಇಂಧನ ಕ್ಷೇತ್ರಗಳಿಗೆ ಸಂಬಂಧಿಸಿದ ನಿಬಂಧನೆಗಳಿಗೆ ಆಡಳಿತಾರೂಢ ರಿಪಬ್ಲಿಕನ್ ಪಕ್ಷದ ಕೆಲ ಸಂಸದರ ವಿರೋಧವಿದೆ. ಭಾರತೀಯರು ವಲಸೆ ಹೋಗುವ ರಾಷ್ಟ್ರಗಳ ಪೈಕಿ ಅಮೆರಿಕವೇ ಮೊದಲ ಆಯ್ಕೆ. ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾರತೀಯರಿದ್ದಾರೆ. ಬ್ಯೂಟಿಫುಲ್ ಮಸೂದೆಯ ಅಂಶಗಳು ವಲಸಿಗರ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸುತ್ತದೆ. ಅಮೆರಿಕದಲ್ಲಿ ದುಡಿದ ಹಣವನ್ನು ಭಾರತಕ್ಕೆ ಕಳುಹಿಸಿದರೆ, ಅದರ ಮೇಲೆ ಹೆಚ್ಚಿನ ಪ್ರಮಾಣದ ತೆರಿಗೆ ಬೀಳಲಿದೆ. ರವಾನಿಸುವ ಹಣಕ್ಕೆ ಶೇ.3.5 ರಷ್ಟು ತೆರಿಗೆ ಇರಲಿದೆ. ಅಂದರೆ, ವಲಸಿಗರೊಬ್ಬರು ಅಮೆರಿಕದಿಂದ ಭಾರತಕ್ಕೆ 83 ಸಾವಿರ ರೂಪಾಯಿ ಕಳುಹಿಸಿದಲ್ಲಿ ಅದಕ್ಕೆ 2,900 ತೆರಿಗೆ ಕಡಿತವಾಗಲಿದೆ. ಈ ತೆರಿಗೆಯು ಎಚ್1ಬಿ, ಎಲ್-1, ಎಫ್-1 ವಿಸಾ ಹಾಗೂ ಗ್ರೀನ್ ಕಾರ್ಡ್ ಹೊಂದಿರುವವರ ಅನ್ವಯವಾಗಲಿದೆ. ಅಮೆರಿಕಕ್ಕೆ ಇನ್ನು ಮುಂದೆ ವಲಸೆ ಹೋಗಬೇಕಾದಲ್ಲಿ ಶಿಕ್ಷಣ ಮತ್ತು ಕೌಶಲ್ಯವನ್ನು ಹೊಂದಿರುವುದು ಕಡ್ಡಾಯವಾಗಲಿದೆ.