ಬಾಂಗ್ಲಾದೇಶ : ಇಲ್ಲಿನ ಕೊಮಿಲ್ಲಾ ಜಿಲ್ಲೆಯ ದೂರದ ಹಳ್ಳಿಯೊಂದರ ಹಿಂದೂ ಮಹಿಳೆಯ ಮೇಲೆ ತಂದೆ, ಮಗ ಸೇರಿ ಅತ್ಯಾಚಾರ ಎಸಗಿ ಸ್ಥಳದಿಂದ ಪರಾರಿಯಾಗಿದ್ದಾರೆ. ಕೆಲವು ದುರುಳರು ಅಸಹಾಯಕ ಮಹಿಳೆಯ ವಿಡಿಯೋ ಸೆರೆಹಿಡಿದು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಅಲ್ಲಿನ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಬೆತ್ತಲಾಗಿರುವ ಮಹಿಳೆ ತನ್ನ ಘನತೆಯ ರಕ್ಷಣೆಗಾಗಿ ಪರಿಪರಿಯಾಗಿ ಕಣ್ಣೀರು ಹಾಕುತ್ತಾ ಬೇಡಿಕೊಳ್ಳುತ್ತಿರುವುದು ದಾಖಲಾಗಿದೆ.
ಜೂನ್ 26ರಂದು ಈ ದುಷ್ಕೃತ್ಯ ನಡೆದಿದೆ. ಕೊಮಿಲ್ಲಾ ಜಿಲ್ಲೆಯ ಮುರಾದ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಚಂದ್ರಾಪುರ ಪಂಚಕಿಟ್ಟಾ ಗ್ರಾಮದ ಶಾಹಿದ್ ಮಿಯಾ ಮತ್ತು ಈತನ ಮಗ ಫಜರ್ ಅಲಿ ಫಜರ್ (36) ಎಂಬಿಬ್ಬರು ಅದೇ ಗ್ರಾಮದ ವಲಸಿಗ ವ್ಯಕ್ತಿಯ ಪತ್ನಿಯ ಮೇಲೆ ಬಲಾತ್ಕಾರ ಮಾಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಆರೋಪಿಗಳನ್ನು ಹಿಡಿದು ಥಳಿಸಿದ್ದಾರೆ. ನಂತರ ಫಜರ್ ಅಲಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ ಘಟನಾ ಸ್ಥಳದಲ್ಲಿದ್ದ ಕೆಲವರು ಸಂತ್ರಸ್ತೆಯ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಕುರಿತು ಮುರಾದ್‌ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಫಜರ್ ಅಲಿ ಮತ್ತು ವಿಡಿಯೋ ಸೆರೆಹಿಡಿದ ಇತರ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತ ಐವರ ವಿರುದ್ಧ ಕಾನೂನು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.