ಪಾಕಿಸ್ತಾನ : ಈ ವರ್ಷದ ಏಪ್ರಿಲ್ 21 ರಿಂದ 27 ರವರೆಗೆ ನಡೆಸಿದ ರಾಷ್ಟ್ರವ್ಯಾಪಿ ಪೋಲಿಯೊ ವಿರೋಧಿ ಅಭಿಯಾನದಲ್ಲಿ ಪಾಕಿಸ್ತಾನ 60,000 ಕ್ಕೂ ಹೆಚ್ಚು ಪೋಲಿಯೊ ಲಸಿಕೆ ನಿರಾಕರಣೆ ಪ್ರಕರಣಗಳನ್ನು ದಾಖಲಿಸಿದೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ. 2025ರ ದೇಶದ ಎರಡನೇ ರಾಷ್ಟ್ರೀಯ ಪೋಲಿಯೊ ನಿರ್ಮೂಲನಾ ಅಭಿಯಾನದಲ್ಲಿ ಒಟ್ಟು 60,906 ಪೋಲಿಯೊ ಲಸಿಕೆ ನಿರಾಕರಣೆಗಳನ್ನು ದಾಖಲಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸಿಂಧ್ ಪ್ರಾಂತ್ಯದಿಂದಲೇ ಅತಿ ಹೆಚ್ಚು ನಿರಾಕರಣೆಗಳು ವರದಿಯಾಗಿವೆ. 39,073 ಪ್ರಕರಣಗಳಲ್ಲಿ 37,000 ಕ್ಕೂ ಹೆಚ್ಚು ಕರಾಚಿಯಿಂದಲೇ ಎಂದು ವರದಿ ತಿಳಿಸಿದೆ. ಬಲೂಚಿಸ್ತಾನ್ ದಲ್ಲಿ 3,500 ಕ್ಕೂ ಹೆಚ್ಚು ನಿರಾಕರಣೆ ಪ್ರಕರಣಗಳೊಂದಿಗೆ ನಂತರದ ಸ್ಥಾನದಲ್ಲಿದ್ದರೆ, ಖೈಬರ್ ಪಖ್ತುಂಖ್ವಾ ಶೇ. 0.4 ರಷ್ಟು ಲಸಿಕೆ ನಿರಾಕರಣೆ ದರ ದಾಖಲಿಸಿದೆ ಎಂದು ಡೇಟಾ ತೋರಿಸುತ್ತದೆ.
ಪೋಷಕರು ನಿರಾಕರಿಸಿದ ಪ್ರಕರಣಗಳು ಪಂಜಾಬ್ ಮತ್ತು ಇಸ್ಲಾಮಾಬಾದ್‌ನಿಂದಲೂ ವರದಿಯಾಗಿವೆ. ಪೋಷಕರು ಪೋಲಿಯೊ ವಿರುದ್ಧ ಹೋರಾಡಲು ಲಸಿಕೆ ಹಾಕಲು ಹಿಂಜರಿಯುತ್ತಿರುವುದು ಪ್ರಮುಖ ಅಡಚಣೆಯಾಗಿ ಪರಿಣಮಿಸಿದೆ. ದೇಶದಲ್ಲಿ ಮತ್ತೊಂದು ಹೊಸ ಪೋಲಿಯೊ ಪ್ರಕರಣ ದೃಢಪಟ್ಟ ಹಿನ್ನೆಲೆಯಲ್ಲಿ ಇತ್ತೀಚಿನ ಮಾಹಿತಿ ಬಂದಿದ್ದು, 2025 ರಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 13ಕ್ಕೆ ಏರಿಕೆ ಆಗಿದೆ.
ಪೋಲಿಯೊ ಎನ್ನುವುದು ವೈರಸ್‌ನಿಂದ ಉಂಟಾಗುವ ಅತ್ಯಂತ ಅಪಾಯಕಾರಿ ಸಾಂಕ್ರಾಮಿಕ ಕಾಯಿಲೆಯಾಗಿದೆ. ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಮುಖ್ಯವಾಗಿ ಮಲ - ಮೌಖಿಕ ಮಾರ್ಗದ ಮೂಲಕ ಅಥವಾ ಕಲುಷಿತ ನೀರು ಅಥವಾ ಆಹಾರದ ಮೂಲಕವೂ ಹರಡಬಹುದಾದ ರೋಗವಾಗಿದೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮುಖ್ಯವಾಗಿ ಪೋಲಿಯೊದಿಂದ ಪ್ರಭಾವಿತರಾಗುತ್ತಾರೆ ಎಂದು WHO ಹೇಳುತ್ತದೆ. ಆದಾಗ್ಯೂ ಲಸಿಕೆ ಹಾಕದ ಯಾವುದೇ ವಯಸ್ಸಿನ ಯಾರಾದರೂ ಈ ರೋಗಕ್ಕೆ ತುತ್ತಾಗಬಹುದು. ಪೋಲಿಯೊಗೆ ಯಾವುದೇ ಚಿಕಿತ್ಸೆ ಇಲ್ಲ, ಅದನ್ನು ತಡೆಗಟ್ಟಲು ಮಾತ್ರ ಸಾಧ್ಯ. ಪೋಲಿಯೊ ಲಸಿಕೆಯನ್ನು ಹಲವು ಬಾರಿ ನೀಡುವುದರಿಂದ ಮಗುವನ್ನು ಜೀವಮಾನವಿಡೀ ರಕ್ಷಿಸಬಹುದು.