image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮನ್​ ಕಿ ಬಾತ್​ನಲ್ಲಿ ಮೋದಿಯಿಂದ ಕಲಬುರಗಿ ಜೋಳದ ರೊಟ್ಟಿ ಪ್ರಸ್ತಾಪ

ಮನ್​ ಕಿ ಬಾತ್​ನಲ್ಲಿ ಮೋದಿಯಿಂದ ಕಲಬುರಗಿ ಜೋಳದ ರೊಟ್ಟಿ ಪ್ರಸ್ತಾಪ

ನವದೆಹಲಿ: ಉತ್ತರ ಕರ್ನಾಟಕದ ವಿಶೇಷ ಆಹಾರವಾದ 'ಜೋಳದ ರೊಟ್ಟಿ'ಗೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಶಂಸೆ ಸಿಕ್ಕಿದೆ. ಅದರಲ್ಲೂ ಕಲಬುರಗಿಯ ಖಡಕ್​ ರೊಟ್ಟಿ ಮತ್ತು ಅದನ್ನು ತಯಾರಿಸಿ ಬ್ರ್ಯಾಂಡ್​ ಮಾಡಿರುವ ಮಹಿಳೆಯರ ಪರಿಶ್ರಮವನ್ನು ಅವರು ಹೊಗಳಿದರು. ತಮ್ಮ ರೇಡಿಯೋ ಮಾಸಿಕ ಕಾರ್ಯಕ್ರಮವಾದ ಮನ್​​ ಕಿ ಬಾತ್​​ನ 123ನೇ ಸಂಚಿಕೆಯಲ್ಲಿ ಕಲಬುರಗಿಯ ಖಡಕ್​ ಜೋಳದ ರೊಟ್ಟಿಯ ಬಗ್ಗೆ ಪ್ರಸ್ತಾಪಿಸಿರುವ ಅವರು, "ಅಲ್ಲಿನ ಮಹಿಳೆಯರು ಜೋಳದ ರೊಟ್ಟಿ ಬ್ರಾಂಡ್ ಆಗಿ ಪರಿವರ್ತಿಸಿದ್ದಾರೆ. ಸಹಕಾರಿ ಸಂಸ್ಥೆಯ ಮೂಲಕ ಪ್ರತಿದಿನ 3 ಸಾವಿರಕ್ಕೂ ಅಧಿಕ ರೊಟ್ಟಿಗಳನ್ನು ಉತ್ಪಾದಿಸುತ್ತಾರೆ. ಈ ವಿಶೇಷ ಆಹಾರ ಈಗ ಹಳ್ಳಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಬೆಂಗಳೂರಿನಲ್ಲಿ ಕೇಂದ್ರ ಮತ್ತು ಆನ್‌ಲೈನ್ ಆಹಾರ ವೇದಿಕೆಗಳ ಮೂಲಕ ಮಾರಾಟವಾಗುತ್ತಿದೆ" ಎಂದು ಹೇಳಿದರು.

"ಕಲಬುರಗಿ ಮಹಿಳೆಯರ ಸಾಧನೆಯೂ ಅತ್ಯುತ್ತಮವಾಗಿದೆ. ಆನ್​ಲೈನ್​ ಮೂಲಕ ರೊಟ್ಟಿಯನ್ನು ಮಾರಾಟ ಮಾಡಲಾಗುತ್ತಿದೆ. ಹಳ್ಳಿಗೆ ಮಾತ್ರ ಸೀಮಿತವಾಗಿದ್ದ ಆಹಾರವು, ಈಗ ದೊಡ್ಡ ದೊಡ್ಡ ನಗರಗಳಲ್ಲಿ ಸ್ಥಾನ ಪಡೆದಿದೆ. ಇದು ಮಹಿಳೆಯರ ಆರ್ಥಿಕ ಸ್ವಾವಲಂಬನೆ ಬೆಳೆಸುವ ಮೂಲಕ, ದೇಶದ ಆರ್ಥಿಕತೆಗೂ ನೆರವು ನೀಡುತ್ತಿದೆ" ಎಂದರು. ಕಲಬುರಗಿಯಲ್ಲಿ ರೊಟ್ಟಿ ಉತ್ಪಾದಕ ಮಹಿಳಾ ಸಂಘವನ್ನು ರೂಪಿಸಲಾಗಿದೆ. ಈ ಪ್ರದೇಶದಲ್ಲಿ ರೊಟ್ಟಿ ಉತ್ಪಾದನೆಯು ಅತ್ಯಧಿಕವಾಗಿರುವ ಕಾರಣ ಇದನ್ನು ಬ್ರ್ಯಾಂಡ್​ ಆಗಿ ರೂಪಿಸಲು ಇಲ್ಲಿನ ಜಿಲ್ಲಾಡಳಿತ ನೆರವು ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿವಿಧೆಡೆ ಮಹಿಳೆಯರು ತಯಾರಿಸುತ್ತಿರುವ ಉತ್ಪನ್ನಗಳ ಬಗ್ಗೆಯೂ ಪ್ರಸ್ತಾಪಿಸಿದರು. "ತೆಲಂಗಾಣದ ಭದ್ರಾಚಲಂನ ಮಹಿಳೆಯರು ರಾಗಿಯಿಂದ ಬಿಸ್ಕತ್ತುಗಳನ್ನು ತಯಾರಿಸುತ್ತಿದ್ದಾರೆ. ಶ್ರೀ ಅಣ್ಣಾ, ಮತ್ತು ಭದ್ರಾದ್ರಿ ಮಿಲ್ಲೆಟ್ ಮ್ಯಾಜಿಕ್ ಎಂದು ಹೆಸರಿಸಲಾದ ಈ ಬಿಸ್ಕತ್ತುಗಳು ಹೈದರಾಬಾದ್‌ನಿಂದ ಲಂಡನ್‌ವರೆಗೆ ತಲುಪಿವೆ" ಎಂದು ತಿಳಿಸಿದರು.

Category
ಕರಾವಳಿ ತರಂಗಿಣಿ