ನವದೆಹಲಿ: 370ನೇ ವಿಧಿ ರದ್ದು, ಆಪರೇಷನ್ ಸಿಂಧೂರ್ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚತುರ ಐಪಿಎಸ್ ಅಧಿಕಾರಿ ಪರಾಗ್ ಜೈನ್ ಅವರು ದೇಶದ ಬಾಹ್ಯ ಗುಪ್ತಚರ ದಳವಾದ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ (RAW) ನೂತನ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ. ಗುಪ್ತಚರ ಸಂಗ್ರಹಣೆ ಮತ್ತು ಭಾರತದ ನೆರೆಹೊರೆಯ ವ್ಯವಹಾರಗಳಲ್ಲಿ ಪರಿಣತಿ ಹೊಂದಿರುವ ಹಿರಿಯ ಐಪಿಎಸ್ ಅಧಿಕಾರಿ ಪರಾಗ್ ಜೈನ್ ಅವರು ನಿರ್ಗಮಿತ ಮುಖ್ಯಸ್ಥ ರವಿ ಸಿನ್ಹಾ ಅವರ ಸ್ಥಾನವನ್ನು ತುಂಬಲಿದ್ದಾರೆ. ಜೂನ್ 30 ರಂದು ನಿವೃತ್ತರಾಗುವ ರವಿ ಸಿನ್ಹಾ ಅವರ ಅಧಿಕಾರವಧಿ ಮುಗಿಯಲಿದ್ದು, ಅಲ್ಲಿಂದ ಮುಂದಿನ ಎರಡು ವರ್ಷಗಳ ಕಾಲ ಜೈನ್ ಅವರ ಗುಪ್ತಚರ ದಳಕ್ಕೆ ಸೇವೆ ಸಲ್ಲಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರಾಗ್ ಜೈನ್ ಅವರು ಪ್ರಸ್ತುತ ಇದೇ ಗುಪ್ತಚರ ದಳದ ವಾಯುಯಾನ ಸಂಶೋಧನಾ ಕೇಂದ್ರದ (ಎಆರ್‌ಸಿ) ಮುಖ್ಯಸ್ಥರಾಗಿದ್ದಾರೆ. ಈ ಸಂಸ್ಥೆಯು ವೈಮಾನಿಕ ಕಣ್ಗಾವಲು ಸೇರಿದಂತೆ ಇತರ ವಿಷಯಗಳ ಮೇಲೆ ಕೆಲಸ ಮಾಡುತ್ತದೆ. ಪಂಜಾಬ್ ಕೇಡರ್‌ನ 1989ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಪರಾಗ್ ಜೈನ್ ಅವರು ಸೂಕ್ಷ್ಮ ಮತ್ತು ಬಿಕ್ಕಟ್ಟಿನ ಕಾರ್ಯಾಚರಣೆಯಲ್ಲಿ ಪರಿಣತಿ ಹೊಂದಿದ್ದಾರೆ. ಪಂಜಾಬ್‌ನಲ್ಲಿ ಭಯೋತ್ಪಾದನೆ ಉತ್ತುಂಗದಲ್ಲಿದ್ದಾಗ ಅವರ ಎಸ್ಎಸ್ಪಿ ಮತ್ತು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ಅಂದಿನ ಅವರ ಕಾರ್ಯತಂತ್ರಗಳು ಗಮನಾರ್ಹವಾಗಿದ್ದವು. ರಾ ಗುಪ್ತಚರ ದಳದಲ್ಲಿ ಅಧಿಕಾರಿಯಾಗಿ ಸೇರಿಕೊಂಡ ಬಳಿಕ ಪಾಕಿಸ್ತಾನದ ಬಗ್ಗೆ ವ್ಯಾಪಕವಾಗಿ ಮಾಹಿತಿಯನ್ನು ಸಂಗ್ರಹಿಸಿದ್ದರು. 370 ನೇ ವಿಧಿ ರದ್ದುಗೊಳಿಸಿದ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮ ಅಧಿಕಾರವನ್ನು ನಿರ್ವಹಿಸಿದ ರೀತಿ ಭಾರೀ ಮೆಚ್ಚುಗೆ ಗಳಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರಾಘ್ ಅವರು ಶ್ರೀಲಂಕಾ ಮತ್ತು ಕೆನಡಾದಲ್ಲಿ ಭಾರತೀಯ ದೂತಾವಾಸಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಕೆನಡಾದಲ್ಲಿದ್ದಾಗ, ಅಲ್ಲಿಂದ ಕಾರ್ಯನಿರ್ವಹಿಸುತ್ತಿದ್ದ ಖಲಿಸ್ತಾನಿ ಭಯೋತ್ಪಾದಕ ಮಾಡ್ಯೂಲ್‌ಗಳ ಮೇಲೆ ತೀವ್ರ ನಿಗಾ ಇರಿಸಿದ್ದರು ಎಂದು ಮೂಲಗಳು ತಿಳಿಸಿವೆ.