ವಾಷಿಂಗ್ಟನ್: ನೊಬೆಲ್ ಶಾಂತಿ ಪ್ರಶಸ್ತಿ ಮೇಲೆ ಕಣ್ಣಿಟ್ಟಂತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾನು ಮಾಡದ ಕೆಲಸಗಳ ಶ್ರೇಯ ಪಡೆದುಕೊಳ್ಳಲು ಪದೇ ಪದೆ ಪ್ರಯತ್ನಿಸುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ನಿಲ್ಲಿಸಿದ್ದು ತಾನೇ ಎಂದು 20ನೇ ಬಾರಿ ಹೇಳಿಕೊಂಡಿದ್ದಾರೆ. ಪಹಲ್ಗಾಮ್ ದಾಳಿಯ ಬಳಿಕ ಭಾರತ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸಿದಾಗ ತತ್ತರಿಸಿದ ಆ ದೇಶ ಕದನ ವಿರಾಮಕ್ಕೆ ಯಾಚಿಸಿತ್ತು. ಹೀಗಾಗಿ, ನಾವು ಕಾರ್ಯಾಚರಣೆ ನಿಲ್ಲಿಸಿದೆವು ಎಂದು ಭಾರತ ಅಮೆರಿಕದ ಅಧ್ಯಕ್ಷರಿಗೆ ಸ್ಪಷ್ಟನೆ ನೀಡಿತ್ತು. ಇದನ್ನು ಸ್ವತಃ ಪಾಕಿಸ್ತಾನವೂ ಒಪ್ಪಿಕೊಂಡಿತ್ತು.
ತನ್ನ ಹಳೆ ಚಾಳಿಯನ್ನು ಬಿಡಲೊಲ್ಲದ ಟ್ರಂಪ್, ಎರಡೂ ರಾಷ್ಟ್ರಗಳ ನಡುವಿನ ಸಂಘರ್ಷ ನಿಂತಿದ್ದು ತನ್ನಿಂದಲೇ. ಈ ಕದನ ನಿಲ್ಲಿಸದಿದ್ದರೆ ಅಮೆರಿಕದೊಂದಿಗಿನ ನಿಮ್ಮೆಲ್ಲಾ ವ್ಯಾಪಾರವನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದೆ. ಹೀಗಾಗಿ, ಇಬ್ಬರೂ ಕದನ ನಿಲ್ಲಿಸಿದರು ಎಂದು ಹಿಂದಿನ ತಮ್ಮ ಹೇಳಿಕೆಯನ್ನು ಪುನರಾವರ್ತಿಸಿದ್ದಾರೆ. ಶ್ವೇತಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, "ನಾನು ಒಂದಷ್ಟು ಉತ್ತಮ ಕೆಲಸ ಮಾಡಿದ್ದೇನೆ. ಅದರಲ್ಲಿ ಪಾಕಿಸ್ತಾನ- ಭಾರತ ಕದನ ನಿಲ್ಲಿಸಿದ್ದು ಒಂದಾಗಿದೆ. ಇಂತಹ ಹಲವು ಸಂಘರ್ಷಗಳನ್ನು ತಡೆದಿದ್ದೇನೆ" ಎಂದು ಹೇಳಿದ್ದಾರೆ. "ವ್ಯಾಪಾರವನ್ನು ಮುಂದಿಟ್ಟುಕೊಂಡು ನಾನು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ನಿಲ್ಲಿಸಿದೆ. ಕದನ ಮುಂದುವರಿದಲ್ಲಿ ಪರಮಾಣು ದಾಳಿ ನಡೆಯುವ ಸಾಧ್ಯತೆ ಇತ್ತು. ಸಂಘರ್ಷ ಮುಂದುವರಿಸಿದ್ದೇ ಆದಲ್ಲಿ, ನಿಮ್ಮೊಂದಿಗಿನ ಎಲ್ಲ ವ್ಯಾಪಾರ ವಹಿವಾಟುಗಳನ್ನು ನಿಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದೆ" ಎಂದು ಪುನರುಚ್ಚರಿಸಿದ್ದಾರೆ.