ಒಡಿಶಾ : ಜಗದ್ವಿಖ್ಯಾತ ಜಗನ್ನಾಥ ರಥಯಾತ್ರೆ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿದ್ದು, ಈ ಭವ್ಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಲಕ್ಷಾಂತರ ಭಕ್ತರು ಒಡಿಶಾದ ಪುರಿಯತ್ತ ಆಗಮಿಸುತ್ತಿದ್ದಾರೆ. ಪುರಿ ಜಗನ್ನಾಥ ಯಾತ್ರೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಶುಭಾಶಯ ಕೋರಿದ್ದಾರೆ. ದೇವರು ಪ್ರತಿಯೊಬ್ಬರಿಗೂ ಖುಷಿ, ಸಮೃದ್ಧಿ, ಅದೃಷ್ಟ ಹಾಗೂ ಅದ್ಬುತ ಆರೋಗ್ಯ ನೀಡುವಂತೆ ಕೋರಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮೋದಿ, ''ಜಗನ್ನಾಥ ರಥಯಾತ್ರೆಯ ಪವಿತ್ರ ಸಂದರ್ಭದಲ್ಲಿ, ದೇಶದ ಜನರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ. ನಂಬಿಕೆ ಮತ್ತು ಭಕ್ತಿಯ ಈ ಪವಿತ್ರ ಹಬ್ಬವು ಪ್ರತಿಯೊಬ್ಬರ ಜೀವನದಲ್ಲೂ ಸಂತೋಷ, ಸಮೃದ್ಧಿ, ಅದೃಷ್ಟ ಮತ್ತು ಅತ್ಯುತ್ತಮ ಆರೋಗ್ಯವನ್ನು ತರಲಿ'' ಎಂದಿದ್ದಾರೆ.
ಜಗನ್ನಾಥ ರಥಯಾತ್ರೆಯ ಜೊತೆಗೆ, ಹಿಂದೂ ಕ್ಯಾಲೆಂಡರ್ ಪ್ರಕಾರ ಆಷಾಢ ಮಾಸದ ಎರಡನೇ ದಿನದಿಂದ ಪ್ರಾರಂಭವಾಗುವ ಕಚ್ ಹೊಸ ವರ್ಷಕ್ಕೂ ಪ್ರಧಾನಿ ಶುಭ ಕೋರಿದ್ದಾರೆ. ರಥಯಾತ್ರೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್ನಲ್ಲಿರುವ 400 ವರ್ಷಗಳಷ್ಟು ಪುರಾತನವಾದ ಜಗನ್ನಾಥ ದೇಗುಲಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಮುಂಜಾನೆ ನಾಲ್ಕು ಗಂಟೆಗೆ ಮಂಗಳಾರತಿಯಲ್ಲಿ ಅವರು ಭಾಗಿಯಾದರು.