ಚೀನಾ : ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಸ್ಪಷ್ಟ ನಿಲುವು ತಳೆಯದ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಜಂಟಿ ಹೇಳಿಕೆಗೆ ಸಹಿ ಹಾಕಲು ಭಾರತ ನಿರಾಕರಿಸಿದೆ. ಈ ಮೂಲಕ ಚೀನಾದ ನೆಲದಲ್ಲಿ ನಿಂತು, ಪಾಕಿಸ್ತಾನ ಮತ್ತು ಅದನ್ನು ಬೆಂಬಲಿಸುವ ರಾಷ್ಟ್ರಗಳಿಗೆ ಖಡಕ್ ಸೂಚನೆ ರವಾನಿಸಿದೆ. ಚೀನಾದ ಶಿಂಗ್ದಾಂವ್ನಲ್ಲಿ ಶಾಂಘೈ ಸಹಕಾರ ಸಂಘಟನೆಯ ರಕ್ಷಣಾ ಸಚಿವರ ಸಭೆ ನಡೆಯಿತು. ಇದರಲ್ಲಿ ಭಾರತದ ಪರವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾಗವಹಿಸಿದ್ದರು.
ಸಭೆಯಲ್ಲಿ ಸದಸ್ಯ ರಾಷ್ಟ್ರಗಳ ಒಮ್ಮತದ ಅಭಿಪ್ರಾಯವುಳ್ಳ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ, ಪಾಕಿಸ್ತಾನ ಪ್ರಾಯೋಜಿತ ಗಡಿಯಾಚೆಗಿನ ಉಗ್ರವಾದದ ಕುರಿತು ಭಾರತದ ಕಳವಳವನ್ನು ಸ್ಪಷ್ಟವಾಗಿ ಉಲ್ಲೇಖಿಸದ ಕಾರಣ, ಶಾಂಘೈ ಸಹಕಾರ ಸಂಘಟನೆಯ ಪ್ರಕಟಣೆಗೆ ಸಹಿ ಹಾಕದಿರಲು ರಾಜನಾಥ್ ಸಿಂಗ್ ಅವರು ನಿರ್ಧರಿಸಿದರು. ಈ ವೇಳೆ ಮಾತನಾಡಿರುವ ಅವರು, "ಭಯೋತ್ಪಾದಕರು ಮತ್ತು ಭಯೋತ್ಪಾದನೆಯನ್ನು ಬೆಂಬಲಿಸುವವರನ್ನು ಹೊಣೆಗಾರರನ್ನಾಗಿ ಮಾಡಬೇಕು. ಇಲ್ಲವಾದಲ್ಲಿ ರಾಷ್ಟ್ರಗಳ ನಡುವೆ ಶಾಂತಿ, ಸಹಕಾರ ಮುಂದುವರಿಯಲು ಸಾಧ್ಯವಿಲ್ಲ" ಎಂದು ಪಾಕಿಸ್ತಾನವನ್ನು ಗುರಿಯಾಗಿಸಿ ಹೇಳಿಕೆ ನೀಡಿದರು. "ಗಡಿಯಾಚೆಗಿನ ಭಯೋತ್ಪಾದಕ ಚಟುವಟಿಕೆಗಳು ಸೇರಿದಂತೆ ಭಯೋತ್ಪಾದನೆಯನ್ನು ಎದುರಿಸಲು ಯಾವುದೇ ಸ್ಪಷ್ಟ ನಿರ್ಧಾರಗಳಿಲ್ಲ. ಉಗ್ರವಾದವನ್ನು ಎದುರಿಸುವಲ್ಲಿ ಎರಡು ಮಾನದಂಡಗಳು ಇರಬಾರದು. ಎಸ್‌ಸಿಒ ಸದಸ್ಯ ರಾಷ್ಟ್ರಗಳು ಒಗ್ಗಟ್ಟಿನಿಂದ ಇಂತಹ ಬೆದರಿಕೆಯನ್ನು ಖಂಡಿಸಬೇಕು" ಎಂದು ಒತ್ತಾಯಿಸಿದರು.