ಅಮೆರಿಕ : ಚೀನಾದೊಂದಿಗೆ ಅಮೆರಿಕವು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ಮಾತನಾಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಶೀಘ್ರದಲ್ಲೇ ಭಾರತದೊಂದಿಗೆ ದೊಡ್ಡ ವ್ಯಾಪಾರ ಒಪ್ಪಂದ ನಡೆಯಲಿದೆ ಎಂದು ಸುಳಿವು ನೀಡಿದ್ದಾರೆ. ಬಿಗ್ ಬ್ಯೂಟಿಫುಲ್ ಮಸೂದೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚೀನಾದೊಂದಿಗೆ ನಿನ್ನೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಇದು ಅದ್ಬುತ ಒಪ್ಪಂದವಾಗಿದೆ. ಮುಂದಿನ ದಿನಗಳಲ್ಲಿ ಭಾರತದೊಂದಿಗೂ ಮತ್ತೊಂದು ದೊಡ್ಡ ವ್ಯಾಪಾರ ಒಪ್ಪಂದಕ್ಕೆ ಮುಂದಾಗುತ್ತೇವೆ ಎಂದಿದ್ದಾರೆ. ಇದೇ ವೇಳೆ ಟ್ರಂಪ್, ಈ ರೀತಿಯ ದೊಡ್ಡ ವ್ಯಾಪಾರ ಒಪ್ಪಂದಗಳನ್ನು ಬೇರೆ ಎಲ್ಲಾ ದೇಶದೊಂದಿಗೆ ನಡೆಸುವುದಿಲ್ಲ. ಆದರೆ, ಕೆಲವು ಒಳ್ಳೆಯ ಒಪ್ಪಂದಗಳನ್ನು ನಾವು ಮಾಡಿಕೊಳ್ಳಲಿದ್ದೇವೆ ಎಂದು ಕೂಡ ತಿಳಿಸಿದ್ದಾರೆ.
ಕೆಲವರಿಗೆ ನಾವು ತುಂಬಾ ಧನ್ಯವಾದ ತಿಳಿಸುವ ನಿಟ್ಟಿನಲ್ಲಿ ಪತ್ರ ಕಳುಹಿಸಲಿದ್ದೇನೆ. ಶೇ.25, 35, 45ರಷ್ಟು ಸುಂಕ ಪಾವತಿಗೆ ನೀವು ಸಿದ್ದರಿರಬೇಕು. ಆದರೆ, ಇದು ಸುಲಭದ ಮಾರ್ಗವಲ್ಲ. ಆದರೆ, ಕೆಲವರು ಮಾತ್ರ ಈ ಒಪ್ಪಂದಕ್ಕೆ ಬಯಸುತ್ತಾರೆ. ಕೆಲವರ ಜೊತೆ ಮಾತ್ರ ಮಹತ್ವದ ಒಪ್ಪಂದವನ್ನು ನಾವು ಮಾಡುತ್ತಿದ್ದೇವೆ. ಬಹುಶಃ ಭಾರತದೊಂದಿಗೆ ದೊಡ್ಡ ವ್ಯಾಪಾರ ಒಪ್ಪಂದ ನಡೆಯಲಿದೆ ಎಂದರು. ಭಾರತದೊಂದಿಗೆ ಒಪ್ಪಂದ ಕುರಿತು ಈ ತಿಂಗಳ ಆರಂಭದಲ್ಲೂ ಕೂಡ ಅಮೆರಿಕ - ಭಾರತ ಕಾರ್ಯತಂತ್ರ ಸಹಭಾಗಿತ್ವ ವೇದಿಕೆಯಲ್ಲಿ ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಹಾವರ್ಡ್ ಲುಟ್ನಿಕ್ ಮಾತನಾಡಿದ್ದರು. ಶೀಘ್ರದಲ್ಲೇ ಭಾರತ ಮತ್ತು ಅಮೆರಿಕದ ನಡುವೆ ಒಪ್ಪಂದ ಪೂರ್ಣಗೊಳ್ಳಲಿದೆ. ಎರಡೂ ದೇಶಗಳ ಸಾಮಾನ್ಯ ಹಿತಾಸಕ್ತಿಯ ಆಧಾರದ ಮೇಲೆ ಇದು ನಡೆಯಲಿದ್ದು, ಆದಷ್ಟು ಬೇಗ ಈ ವ್ಯಾಪಾರ ಒಪ್ಪಂದ ಘೋಷಣೆಯಾಗಲಿದೆ ಎಂದಿದ್ದರು.