image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪಿಎಫ್ಐಯಿಂದ ಕೇರಳದ ಮಾಜಿ ಜಿಲ್ಲಾ ನ್ಯಾಯಾಧೀಶರು, ಹಿಂದೂ ಸಮುದಾಯದ ಮುಖಂಡರು ಸೇರಿದಂತೆ ಸುಮಾರು 972 ಜನರ ಹಿಟ್ ಲಿಸ್ಟ್ : ಎನ್.ಐ.ಎ

ಪಿಎಫ್ಐಯಿಂದ ಕೇರಳದ ಮಾಜಿ ಜಿಲ್ಲಾ ನ್ಯಾಯಾಧೀಶರು, ಹಿಂದೂ ಸಮುದಾಯದ ಮುಖಂಡರು ಸೇರಿದಂತೆ ಸುಮಾರು 972 ಜನರ ಹಿಟ್ ಲಿಸ್ಟ್ : ಎನ್.ಐ.ಎ

ಕೇರಳ : ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕೇರಳದ ಮಾಜಿ ಜಿಲ್ಲಾ ನ್ಯಾಯಾಧೀಶರು, ಹಿಂದೂ ಸಮುದಾಯದ ಮುಖಂಡರು ಸೇರಿದಂತೆ ಸುಮಾರು 972 ಜನರ ಹಿಟ್ ಲಿಸ್ಟ್ ತಯಾರಿಸಿತ್ತು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಇಲ್ಲಿನ ನ್ಯಾಯಾಲಯಕ್ಕೆ ದಾಖಲೆಗಳನ್ನು ಸಲ್ಲಿಸಿದೆ. ಎನ್ಐಎ ನೀಡಿದ ದಾಖಲೆಗಳ ಪ್ರಕಾರ, ಪಿಎಫ್ಐ ತನ್ನ ರಹಸ್ಯ ಮಾಹಿತಿ ಸಂಗ್ರಹ ವಿಭಾಗದ ಮೂಲಕ ಇತರ ಸಮುದಾಯಗಳ ಜನರ ವೈಯಕ್ತಿಕ ವಿವರಗಳನ್ನು ಸಂಗ್ರಹಿಸಿದೆ. ಅವರ ಹೆಸರು, ನಿವಾಸ, ವಯಸ್ಸು, ಫೋಟೋ ಇತ್ಯಾದಿ ಸಂಗ್ರಹಿಸಿತ್ತು. ಇದರಿಂದ ಯಾರ ಮೇಲೆ ದಾಳಿ ಮಾಡಬೇಕು ಎಂಬುದನ್ನು ಯೋಜಿಸಿತ್ತು ಎಂದು ಉಲ್ಲೇಖಿಸಲಾಗಿದೆ.

ಉಗ್ರ ಚಟುವಟಿಕೆಗಳಲ್ಲಿ ತೊಡಗಿದ್ದ ಪಿಎಫ್ಐ ಮೂರು ವಿಭಾಗಗಳಾದ ವರದಿಗಾರರ ವಿಭಾಗ, ದೈಹಿಕ ಮತ್ತು ಶಸ್ತ್ರಾಸ್ತ್ರ ತರಬೇತಿ ವಿಭಾಗ ಮತ್ತು ಸೇವಾ ವಿಭಾಗ ಅಥವಾ ದಾಳಿ ತಂಡಗಳನ್ನು ಹೊಂದಿತ್ತು. ಸಂಘಟನೆಗೆ ಗುಪ್ತಚರ ದಳವಾಗಿ ವರದಿಗಾರರ ವಿಭಾಗ ಕೆಲಸ ಮಾಡುತ್ತಿತ್ತು. ಇದು ಸಮಾಜದ ಪ್ರಮುಖ ವ್ಯಕ್ತಿಗಳ ಖಾಸಗಿ ಮತ್ತು ವೈಯಕ್ತಿಕ ಮಾಹಿತಿ ಸಂಗ್ರಹಿಸಿದೆ. ಇತರ ಸಮುದಾಯಗಳ ಮುಖಂಡರು, ವಿಶೇಷವಾಗಿ ಹಿಂದು ನಾಯಕರ ಬಗ್ಗೆ ಮಹತ್ವದ ದಾಖಲೆಗಳನ್ನು ಹೊಂದಿತ್ತು ಎಂದು ಎನ್​ಐಎ ಹೇಳಿದೆ. ಪಿಎಫ್‌ಐ ಜಿಲ್ಲಾ ಮಟ್ಟದಲ್ಲಿ ವಿವರವನ್ನು ಸಂಗ್ರಹಿಸಿ, ಅದನ್ನು ರಾಜ್ಯ ಮಟ್ಟದ ಶ್ರೇಣಿಗೆ ರವಾನಿಸುತ್ತಿತ್ತು. ಭಯೋತ್ಪಾದಕ ತಂಡಕ್ಕೆ ಅಗತ್ಯವಿರುವ ವ್ಯಕ್ತಿಗಳನ್ನು ಗುರಿಯಾಗಿಸಲು ಎಲ್ಲ ವಿವರಗಳನ್ನು ನಿಯಮಿತವಾಗಿ ನೀಡುತ್ತಿತ್ತು. ಅದನ್ನು ಬಳಸಿ ಆ ತಂಡ ದಾಳಿ ಮಾಡುತ್ತಿತ್ತು ಎಂದು ಏಜೆನ್ಸಿಯು ನ್ಯಾಯಾಲಯಕ್ಕೆ ತಿಳಿಸಿದೆ.

2022 ರಲ್ಲಿ ಆರ್​ಎಸ್​ಎಸ್​ ಮುಖಂಡ ಎಸ್.ಕೆ. ಶ್ರೀನಿವಾಸನ್ ಅವರ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್​​ಐಎ, ಕೆಲವು ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ವಿಶೇಷ NIA ನ್ಯಾಯಾಲಯದ ಆದೇಶದಲ್ಲಿ ಈ ದಾಖಲೆಗಳನ್ನು ಉಲ್ಲೇಖಿಸಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹಿರಿಯ ಮುಖಂಡ ಶ್ರೀನಿವಾಸನ್ ಅವರನ್ನು 2022 ರ ಏಪ್ರಿಲ್ 16 ರಂದು ಪಿಎಫ್‌ಐ ಕಾರ್ಯಕರ್ತರು ಅವರ ಅಂಗಡಿಗೆ ನುಗ್ಗಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಪ್ರಕರಣ ತನಿಖೆ ನಡೆಸಿದ ಎನ್​ಐಎ ಪಿಎಫ್​​ಐನ ಹಲವು ಕಾರ್ಯಕರ್ತರನ್ನು ಆರೋಪಿಗಳಾಗಿ ಬಂಧಿಸಿತ್ತು. ಪಿಎಫ್​ಐ ಸೇರಿದ ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಲಾಗುತ್ತಿದ್ದ ಪೆರಿಯಾರ್ ವ್ಯಾಲಿ ಕ್ಯಾಂಪಸ್ ಅನ್ನು ವಶಪಡಿಸಿಕೊಂಡಿತ್ತು. ಇದಾದ ಬಳಿಕ ಸಂಘಟನೆಯ ಮೇಲೆ ಹಲವಾರು ಭಯೋತ್ಪಾದನೆ ಕೃತ್ಯಗಳಲ್ಲಿ ತೊಡಗಿದ ಮತ್ತು ಜಾಗತಿಕ ಉಗ್ರ ಸಂಘಟನೆಯಾದ ಐಸಿಸ್​ ಜೊತೆಗೆ ನಂಟು ಹೊಂದಿದ ಆರೋಪ ಹೊರಿಸಲಾಗಿತ್ತು. ಇದರಿಂದ ಸಂಘಟನೆಯನ್ನು ಕೇಂದ್ರ ಸರ್ಕಾರವು 2022 ರ ಸೆಪ್ಟೆಂಬರ್​​ನಲ್ಲಿ ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ 5 ವರ್ಷ ನಿಷೇಧಿಸಿದೆ.

Category
ಕರಾವಳಿ ತರಂಗಿಣಿ