ಚೀನಾ : ಪಾಕಿಸ್ತಾನದ ದ್ವಿಮುಖ ನಡೆಯ ವಿರುದ್ಧ ಮತ್ತೊಮ್ಮೆ ಚಾಟಿ ಬೀಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಯೋತ್ಪಾದನೆಗೆ ಹಣಕಾಸು ಒದಗಿಸುವವರು ಮತ್ತು ಅದರ ಪ್ರಾಯೋಜಕರನ್ನು ಹೊಣೆಗಾರರನ್ನಾಗಿ ಮಾಡಬೇಕು. ಇಂತಹ ಬೆದರಿಕೆಗಳನ್ನು ಎದುರಿಸುವಲ್ಲಿ ದ್ವಿಮುಖ ಮಾನದಂಡ ಇರಲೇಬಾರದು ಎಂದರು. ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆಲವು ದೇಶಗಳು ಭಯೋತ್ಪಾದಕರಿಗೆ ಆಶ್ರಯ ನೀಡಲು ಗಡಿಯಾಚೆಗಿನ ಭಯೋತ್ಪಾದನೆ ನೀತಿಯನ್ನು ಸಾಧನವಾಗಿ ಬಳಸುತ್ತಿವೆ. ನಮ್ಮ ಪ್ರದೇಶದಲ್ಲಿ ನಾವು ಎದುರಿಸುತ್ತಿರುವ ದೊಡ್ಡ ಸವಾಲುಗಳು ಶಾಂತಿ, ಭದ್ರತೆ ಮತ್ತು ನಂಬಿಕೆ ಕೊರತೆಗೆ ಸಂಬಂಧಿಸಿದೆ ಎಂದು ಹೇಳಿದರು.
ಶಾಂತಿ, ಸಮೃದ್ದಿಯೊಂದಿಗೆ ಭಯೋತ್ಪಾದನೆ ಜೊತೆಯಾಗಿ ಹೋಗಲು ಸಾಧ್ಯವೇ ಇಲ್ಲ. ಇಂತಹ ಸವಾಲುಗಳನ್ನು ಎದುರಿಸಲು ನಿರ್ಣಾಯಕ ಕ್ರಮಗಳ ಅವಶ್ಯಕತೆ ಇದೆ. ದೇಶದ ಭದ್ರತೆ ಮತ್ತು ರಕ್ಷಣೆಗಾಗಿ ಇಂತಹ ಕೆಟ್ಟ ಶಕ್ತಿಗಳ ವಿರುದ್ಧ ಒಗ್ಗಟ್ಟಿನ ಹೋರಾಟ ಬೇಕಿದೆ ಎಂದರು. ತಮ್ಮ ಸ್ವಾರ್ಥಕ್ಕಾಗಿ ಭಯೋತ್ಪಾದನೆಯನ್ನು ಪೋಷಿಸುವವರು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕೂಡ ಇದೇ ಸಂದರ್ಭದಲ್ಲಿ ರಕ್ಷಣಾ ಸಚಿವ ಸಿಂಗ್ ಎಚ್ಚರಿಕೆ ನೀಡಿದರು.