ಪಾಕಿಸ್ತಾನ : 2019ರ ಬಾಲಾಕೋಟ್ ವೈಮಾನಿಕ ದಾಳಿಯ ಸಮಯದಲ್ಲಿ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಸೆರೆಹಿಡಿದಿದ್ದೇನೆ ಎಂದು ಹೇಳಿಕೊಂಡಿದ್ದ ಪಾಕಿಸ್ತಾನದ ವಿಶೇಷ ಪಡೆಗಳ ಅಧಿಕಾರಿ ತಾಲಿಬಾನ್ ಉಗ್ರರೊಂದಿಗಿನ ಘರ್ಷಣೆಯಲ್ಲಿ ಹತನಾಗಿದ್ದಾರೆ. ಅಫ್ಘಾನ್ ಗಡಿ ಬಳಿಯ ದಕ್ಷಿಣ ವಜೀರಿಸ್ತಾನದ ಸಾರೋಘಾ ಪ್ರದೇಶದಲ್ಲಿ ತಾಲಿಬಾನ್ ಉಗ್ರ ಸಂಘಟನೆಯಾದ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಜೊತೆಗಿನ ಘರ್ಷಣೆಯಲ್ಲಿ ಮೇಜರ್ ಸೈಯದ್ ಮೊಯಿಜ್ ಅಬ್ಬಾಸ್ ಶಾ (37) ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ.
ಅಬ್ಬಾಸ್ ಶಾ ಸಾವಿಗೆ ಪಾಕಿಸ್ತಾನಿ ತಾಲಿಬಾನ್ ಎಂದು ಕರೆಯಲ್ಪಡುವ ಟಿಟಿಪಿ ಹೊಣೆ ಹೊತ್ತಿದೆ. ಈ ಸಂಘಟನೆಯು ಪಾಕ್ ಮತ್ತು ಅಫ್ಘಾನ್ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಶಸ್ತ್ರ ಇಸ್ಲಾಮಿಕ್ ಗುಂಪಾಗಿದೆ. ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಸೇನೆ ಪಾಕಿಸ್ತಾನದಲ್ಲಿನ ಉಗ್ರ ನೆಲೆಗಳ ಮೇಲೆ ಭೀಕರ ದಾಳಿ ಮಾಡಿತ್ತು. ಆಗ ವಿಂಗ್ ಕಮಾಂಡರ್ ಆಗಿದ್ದ ಅಭಿನಂದನ್ ವರ್ಧಮಾನ್ ಅವರು ಪಾಕ್ ಸೇನೆಯೊಂದಿಗಿನ ಸೆಣಸಾಟದಲ್ಲಿ ಅದರ ಎಫ್-16 ಯುದ್ಧ ವಿಮಾನವನ್ನು ಭಾರತದ ಅತ್ಯಂತ ಹಳೆಯ ಮಿಗ್-21 ಫೈಟರ್ ಜೆಟ್ನಿಂದ ಹೊಡೆದುರುಳಿಸಿದ್ದರು.
ಬಳಿಕ, ಭಾರತದ ಕಡೆ ವಾಪಸ್ ಆಗುತ್ತಿದ್ದಾಗ ಮಿಗ್ ಯುದ್ಧ ವಿಮಾನ ಡಿಕ್ಕಿ ಹೊಡೆದು ಪಾಕಿಸ್ತಾನ ಅಕ್ರಮವಾಗಿ ವಶಪಡಿಸಿಕೊಂಡಿರುವ ಕಾಶ್ಮೀರದ ಪ್ರದೇಶದಲ್ಲಿ ಬಿದ್ದಿತು. ಅದರಲ್ಲಿದ್ದ ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನದ ಸೈನಿಕರು ಬಂಧಿಸಿದ್ದರು. ಭಾರತ ಮತ್ತು ಜಾಗತಿಕ ಸಮುದಾಯದ ಒತ್ತಡಕ್ಕೆ ಮಣಿದ ಪಾಕಿಸ್ತಾನ ಅಭಿನಂದನ್ ಅವರನ್ನು ಬಿಡುಗಡೆ ಮಾಡಿತು. ಯಾವುದೇ ಅಪಾಯದವಿಲ್ಲವೇ ಅವರು ತಾಯ್ನಾಡಿಗೆ ವಾಪಸಾದರು. ಕೆಲ ದಿನಗಳ ಬಳಿಕ ಮತ್ತೆ ವಾಯುಪಡೆ ಸೇರಿದ ಅವರಿಗೆ 2021ರಲ್ಲಿ ಗ್ರೂಪ್ ಕ್ಯಾಪ್ಟನ್ ಆಗಿ ಬಡ್ತಿ ನೀಡಲಾಯಿತು. ಜೊತೆಗೆ ವೀರ ಚಕ್ರವನ್ನೂ ಪ್ರದಾನ ಮಾಡಲಾಯಿತು.