ಡೆಹ್ರಾಡೂನ್: ಉತ್ತರಾಖಂಡ್ನಲ್ಲಿ ಕಳೆದ 48 ಗಂಟೆಗಳಿಂದ ಸುರಿಯುತ್ತಿರುವ ಮಳೆಯು ಅನೇಕ ಅನಾಹುತಗಳಿಗೆ ಕಾರಣವಾಗಿದೆ. ವಿಶೇಷವಾಗಿ ಗುಡ್ಡಗಾಡು ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಹೆದ್ದಾರಿ, ಗಡಿ ರಸ್ತೆಗಳು ಸೇರಿದಂತೆ 24 ರಸ್ತೆಗಳ ಸಂಚಾರ ಬಂದ್ ಆಗಿದ್ದು, ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾನ್ಸೂನ್ನ ಆರಂಭಿಕ ಮಳೆ ನಿರಂತರವಾಗಿ ಸುರಿಯುತ್ತಿರುವ ಪರಿಣಾಮ ಗುಡ್ಡ ಕುಸಿತ ಸೇರಿದಂತೆ ಅನೇಕ ನೈಸರ್ಗಿಕ ವಿಪತ್ತುಗಳು ಸಂಭವಿಸಿದೆ. ಇದರಿದಾಗಿ 18 ಜನರು ಸಾವನ್ನಪ್ಪಿದ್ದು, ಇಬ್ಬರು ಕಣ್ಮರೆಯಾಗಿದ್ದಾರೆ.
ರಾಜ್ಯದಲ್ಲಿನ ಅದರಲ್ಲೂ ವಿಶೇಷವಾಗಿ ಗುಡ್ಡಗಾಡು ಪ್ರದೇಶದಲ್ಲಿ ಸಂಭವಿಸಿದ ನೈಸರ್ಗಿಕ ವಿಪತ್ತಿನ ನಿರ್ವಹಣೆ ಸಂಬಂಧ ಸಿಎಂ ಪುಷ್ಕರ್ ಸಿಂಗ್ ಧಾಮಿ ವಿಪತ್ತು ನಿರ್ವಹಣಾ ಇಲಾಖೆ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಸಭೆ ನಡೆಸಿದ್ದಾರೆ. ಮಳೆಯು ಇದೆ ರೀತಿ ಮುಂದುವರೆದಲ್ಲಿ ಪ್ರವಾಹ ನಿರ್ಮಾಣ ಪರಿಸ್ಥಿತಿ ಉಂಟಾಗಲಿದ್ದು, ಈ ಹಿನ್ನೆಲೆ ಆ ಹೊತ್ತಿಗೆ ರಕ್ಷಣೆ ಮತ್ತು ಪರಿಹಾರ ಕಾರ್ಯ ನಡೆಸುವಂತೆ ಸೂಚಿಸಲಾಗಿದೆ. ರಾಜ್ಯದಲ್ಲಿ ಜೂನ್ 20ಕ್ಕೆ ಮಾನ್ಸೂನ್ ಪ್ರವೇಶವಾಗಿದ್ದು ಅನೇಕ ಕಡೆ ಕಳೆದ 24 ಗಂಟೆಗಳಿಂದ ಹಗರದಿಂದ ಸಾಧಾರಣವರೆಗೆ ಮಳೆಯಾಗಿದೆ. ಕೆಲವು ಕಡೆ ಭಾರೀ ಮಳೆಯಾಗಿದೆ ಎಂದು ಉತ್ತರಾಖಂಡದ ಹವಾಮಾನ ಇಲಾಖೆ ತಿಳಿಸಿದೆ.
ರಸ್ತೆ ತುರ್ತು ಕಾರ್ಯಾಚರಣೆ ಕೇಂದ್ರದ ಮಾಹಿತಿ ಅನುಸಾರ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುಮಾರು 24 ರಸ್ತೆಗಳು ಬಂದ್ ಆಗಿವೆ. ಅಲ್ಮೊರಾ ಜಿಲ್ಲೆಯಲ್ಲಿ ಒಂದು ರಾಜ್ಯ ಹೆದ್ದಾರಿ, ಹರಿದ್ವಾರದಲ್ಲಿ ಒಂದು ರಾಜ್ಯ ಹೆದ್ದಾರಿ, ಪಿತ್ರೋಗಢ ಜಿಲ್ಲೆಯಲ್ಲಿ ಒಂದು ಗಡಿ ರಸ್ತೆ ಹಾಗೂ ಒಂದು ಪಿಡಬ್ಲ್ಯೂಡಿ ರಸ್ತೆ ಬಂದ್ ಆಗಿದೆ, ತೆಹ್ರಿಯಲ್ಲಿ ಆರು ಪಿಡಬ್ಲ್ಯೂಡಿ ರಸ್ತೆ ಹಾಗೂ ಚಮೋಲಿಯಲ್ಲಿ 6 ಮತ್ತು ಬಾಗೇಶ್ವರ ಹಾಗೂ ಚಂಪಾವತ್ ಹಿಲ್ಲೆಯಲ್ಲಿ ತಲಾ 3 ಪಿಡಬ್ಲ್ಯೂಡಿ ರಸ್ತೆ ಬಂದ್ ಆಗಿದ್ದರೆ, ಪೌರಿ ಜಿಲ್ಲೆಯಲ್ಲಿ 1 ರಸ್ತೆ ಸಂಚಾರ ಕಡಿವಾಗಿದೆ. ರಾಜ್ಯದಲ್ಲಿ ಎರಡು ರಾಜ್ಯ ಹೆದ್ದಾರಿ, ಒಂದು ಗಡಿ ರಸ್ತೆ ಹಾಗೂ ಅನೇಕ ಜಿಲ್ಲೆಯಲ್ಲಿ 25 ರಸ್ತೆಗಳ ಸಂಚಾರ ಬಂದ್ ಆಗಿದೆ.
ನೈಸರ್ಗಿಕ ವಿಪತ್ತಿನಿಂದ ಜೂನ್ 1ರಿಂದ ಜೂನ್ 23ರ ನಡುವೆ 18 ಮಂದಿ ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿದ್ದಾರೆ. ಇಬ್ಬರು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ರಸ್ತೆ ಅಪಘಾತದಲ್ಲಿ ನೂನ್ 1ರಿಂದ 23ರ ವರೆಗೆ 28 ಮಂದಿ ಸಾವನ್ನಪ್ಪಿದ್ದು, 128 ಮಂದಿ ಗಾಯಗೊಂಡಿದ್ದಾರೆ. ಇದರ ಹೊರತಾಗಿ ಚಾರ್ಧಾಮ್ ಯಾತ್ರೆಯಲ್ಲಿ 142 ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ಇದರಲ್ಲಿ 123 ಮಂದು ಅನಾರೋಗ್ಯದಿಂದ ಹಾಗೂ 15 ಮಂದಿ ಇತರೆ ಕಾರಣ ಹಾಗೂ 4 ಮಂದಿ ನೈಸರ್ಗಿಕ ವಿಪತ್ತಿನಿಂದ ಸಾವನ್ನಪ್ಪಿದ್ದಾರೆ. ಇನ್ನು 3 ಯಾತ್ರಾರ್ಥಿಗಳು ನೈಸರ್ಗಿಕ ವಿಪತ್ತಿನ ಘಟನೆಯಿಂದ ಗಾಯಗೊಂಡಿದ್ದು, ಇಬ್ಬರು ನಾಪತ್ತೆಯಾಗಿರುವ ವರದಿಯಾಗಿದೆ.