ಟೆಲ್ ಅವೀವ್: ಇಸ್ರೇಲ್- ಇರಾನ್ ನಡುವೆ 12 ದಿನಗಳಿಂದ ನಡೆಯುತ್ತಿದ್ದ ಸಂಘರ್ಷಕ್ಕೆ ತೆರೆ ಎಳೆಯಲಾಗಿತ್ತು. ಎರಡು ರಾಷ್ಟ್ರಗಳ ನಡುವೆ ಕದನ ವಿರಾಮ ಏರ್ಪಟ್ಟಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು. ಈ ಘೋಷಣೆಯಾದ 2 ಗಂಟೆಯೊಳಗೆ ಇರಾನ್ ಕ್ಷಿಪಣಿಗಳನ್ನು ಹಾರಿಸಿ ಇಸ್ರೇಲ್ನ ಕಟ್ಟಡವನ್ನು ಧ್ವಂಸ ಮಾಡಿದೆ. ಇದರಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಎರಡು ಕ್ಷಿಪಣಿಗಳು ಬೇರ್ಶೆಬಾದ್ ಎಂಬಲ್ಲಿ ಬಿದ್ದಿವೆ. ನಮ್ಮ ನಾಗರಿಕರು ಹತರಾಗಿದ್ದಾರೆ ಎಂದು ಇಸ್ರೇಲ್ ಹೇಳಿದೆ. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಕೂಡ ಎಚ್ಚರಿಕೆ ರವಾನಿಸಿದೆ.
ಇರಾನ್‌ನಿಂದ ಹಾರಿಸಲಾದ ಕ್ಷಿಪಣಿಗಳನ್ನು ಇಸ್ರೇಲಿ ಸೇನೆ ತಡೆಹಿಡಿದಿದೆ. ಕದನ ವಿರಾಮ ಜಾರಿಗೆ ಬಂದ ಕೆಲವೇ ಗಂಟೆಗಳಲ್ಲಿ ಇದು ಸಂಭವಿಸಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ಅಧಿಕಾರಿಯೊಬ್ಬರು ತಿಳಿಸಿದರೆ, ಇದು ಇರಾನ್ನ ಕದನ ವಿರಾಮ ಒಪ್ಪಂದದ ಸ್ಪಷ್ಟ ಉಲ್ಲಂಘನೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಆರೋಪಿಸಿದ್ದಾರೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತುಕತೆ ನಡೆಸಲಾಗಿದ್ದು, ನಮ್ಮ ಉಳಿವಿಗಾಗಿ ಇರಾನ್ ಮೇಲಿನ ಕಾರ್ಯಾಚರಣೆ ತೀವ್ರಗೊಳಿಸಲು ಸೇನಾ ಪಡೆಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕದನ ವಿರಾಮದ ಬಳಿಕ ಬಾಂಬ್ ಬಂಕರ್ಗಳಲ್ಲಿ ಆಶ್ರಯ ಪಡೆದಿದ್ದ ಜನರು ಹೊರಬರಲು ಆರಂಭಿಸಿದ್ದರು. ಇದೇ ವೇಳೆ, ಇರಾನ್‌ನಿಂದ ಹಾರಿಸಲಾದ ಎರಡು ಕ್ಷಿಪಣಿಗಳನ್ನು ಸೇನೆ ಪತ್ತೆಹಚ್ಚಿ ತಡೆದ ನಂತರ ಉತ್ತರ ಇಸ್ರೇಲ್‌ನಾದ್ಯಂತ ಸೈರನ್‌ಗಳು ಮತ್ತೆ ಮೊಳಗಿದವು. ತಕ್ಷಣವೇ ಸೇನೆಯು ಜನರು ಬಂಕರ್ಗಳಲ್ಲಿ ಆಶ್ರಯ ಪಡೆಯುವಂತೆ ಸೂಚಿಸಿತು.
ಕದನ ವಿರಾಮ ಉಲ್ಲಂಘಿಸಲಾಗಿದೆ ಎಂಬ ಇಸ್ರೇಲ್ ಆರೋಪವನ್ನು ಇರಾನ್ ನಿರಾಕರಿಸಿದೆ. ಕದನ ವಿರಾಮ ಘೋಷಣೆಯಾದ ಬಳಿಕ ಯಾವುದೇ ಕ್ಷಿಪಣಿಗಳನ್ನು ಹಾರಿಸಿಲ್ಲ. ಇಸ್ರೇಲ್ ಸುಖಾಸುಮ್ಮನೆ ಆರೋಪ ಮಾಡುತ್ತಿದೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮಗಳಲ್ಲಿ ವರದಿಯಾಗಿದೆ.