ಬಿಹಾರ : ರಾಜ್ಯದಲ್ಲಿ ಪ್ರತಿ ವರ್ಷ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಪೊಲೀಸರು ವಶಪಡಿಸಿಕೊಳ್ಳುತ್ತಾರೆ. ಕ್ಯಾಟ್ರಿಡ್ಜ್‌ಗಳನ್ನು ಅಕ್ರಮವಾಗಿ ಬೇರೆಡೆಗೆ ಸಾಗಿಸಲಾಗುತ್ತಿರುವುದು ಕಂಡುಬಂದ ಹಿನ್ನೆಲೆ ಎಚ್ಚೆತ್ತ ರಾಜ್ಯ ಪೊಲೀಸರು, ಬಂದೂಕು ಪರವಾನಗಿ ಹೊಂದಿರುವವರು ಮದ್ದುಗುಂಡು ಖರೀದಿಗೆ ಮಿತಿಯನ್ನು ವಾರ್ಷಿಕ 200 ಸುತ್ತುಗಳಿಂದ 50 ಸುತ್ತುಗಳಿಗೆ ಕಡಿತಗೊಳಿಸುವಂತೆ ಸೋಮವಾರ ಶಿಫಾರಸು ಮಾಡಿದ್ದಾರೆ. ಬಿಹಾರದಲ್ಲಿ ಪ್ರತಿ ವರ್ಷ ಸರಾಸರಿ 3,600 ಬಂದೂಕುಗಳು ಮತ್ತು 17,000 ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗುತ್ತದೆ, ದೇಶದಲ್ಲಿ ಹಿಂಸಾತ್ಮಕ ಅಪರಾಧಗಳು ನಡೆಯುವ ಅಗ್ರ ಐದು ರಾಜ್ಯಗಳಲ್ಲಿ ಬಿಹಾರ ಒಂದಾಗಿದೆ.
ಅಚ್ಚರಿಯ ಅಂಶವೆಂದರೆ ಬಂದೂಕುಗಳು ಹೆಚ್ಚಾಗಿ ಅಕ್ರಮ ಮತ್ತು ದೇಶೀಯ ನಿರ್ಮಿತವಾಗಿದ್ದರೂ, ಗುಂಡುಗಳನ್ನು ಯಾವಾಗಲೂ ಶಸ್ತ್ರಾಸ್ತ್ರ ಕಾರ್ಖಾನೆಗಳೇ ತಯಾರಿಸುತ್ತವೆ. ಇದು ಬಂದೂಕು ಪರವಾನಗಿ ಹೊಂದಿರುವವರು ಮತ್ತು ಪರವಾನಗಿ ಪಡೆದ ಶಸ್ತ್ರಾಸ್ತ್ರ ಅಂಗಡಿಗಳಿಂದ ಮದ್ದುಗುಂಡುಗಳು ಆಕ್ರಮ ರವಾನೆಯನ್ನು ಸೂಚಿಸುತ್ತದೆ. ಪ್ರಸ್ತುತ, ಬಂದೂಕು ಪರವಾನಗಿ ಹೊಂದಿರುವವರು ಒಮ್ಮೆಗೆ 100 ಸುತ್ತು ಮದ್ದುಗುಂಡುಗಳನ್ನು ಹಾಗೂ ವರ್ಷಕ್ಕೆ ಒಟ್ಟು 200 ಸುತ್ತು ಮದ್ದುಗುಂಡುಗಳನ್ನು ಖರೀದಿಸಬಹುದು.
ರಾಜ್ಯದಲ್ಲಿ ಪ್ರಸ್ತುತ 39,272 ಪರವಾನಗಿ ಪಡೆದ ಬಂದೂಕುಗಳು ಬಳಕೆಯಲ್ಲಿವೆ. ಅವುಗಳ ಮೂಲಕ ಪ್ರತಿ ವರ್ಷ ಸುಮಾರು 79 ಲಕ್ಷ ಗುಂಡುಗಳನ್ನು ಖರೀದಿಸಿ ಬೇರೆಡೆಗೆ ಅಕ್ರಮವಾಗಿ ರವಾನಿಸಲಾಗುತ್ತಿದೆ ಎಂದು ಬಿಹಾರ ಪೊಲೀಸ್ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ಕುಂದನ್ ಕೃಷ್ಣನ್ ಅವರು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅರವಿಂದ್ ಕುಮಾರ್ ಚೌಧರಿ ಅವರಿಗೆ ಪತ್ರ ಬರೆದಿದ್ದಾರೆ. "ಶಸ್ತ್ರಾಸ್ತ್ರ ಅಂಗಡಿ ಮಾಲೀಕರು, ಬಂದೂಕು ಪರವಾನಗಿ ಹೊಂದಿರುವವರು ಅಕ್ರಮ ಚಟುವಟಿಕೆಗಳ ಮೂಲಕ ಹಣ ಗಳಿಸುವವರ ಜೊತೆ ಸೇರಿ ಗುಂಡುಗಳ ಪೂರೈಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರವು ಒಂದು ವರ್ಷದಲ್ಲಿ ಖರೀದಿಸಬಹುದಾದ ಗರಿಷ್ಠ ಸಂಖ್ಯೆಯ ಮದ್ದುಗುಂಡುಗಳ ಸಂಖ್ಯೆಯನ್ನು 50 ಸುತ್ತುಗಳಿಗೆ ಮಿತಿಗೊಳಿಸಬೇಕು" ಎಂದು ಕೃಷ್ಣನ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.