ಉತ್ತರ ಪ್ರದೇಶ : ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ)ವು ಸೋಮವಾರ ಮೂವರು ಶಾಸಕರನ್ನು ಉಚ್ಚಾಟಿಸಿದೆ.ಅಶಿಸ್ತು ಮತ್ತು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಗೋಸಾಯಿಗಂಜ್ ಕ್ಷೇತ್ರದ ಶಾಸಕ ಅಭಯ್ ಸಿಂಗ್, ಗೌರಿಗಂಜ್ ಕ್ಷೇತ್ರದ ಶಾಸಕ ರಾಕೇಶ್ ಪ್ರತಾಪ್ ಸಿಂಗ್ ಹಾಗೂ ಉಂಚಾಹರ್ ಕ್ಷೇತ್ರದ ಶಾಸಕ ಮನೋಜ್ ಕುಮಾರ್ ಪಾಂಡೆ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಸಮಾಜವಾದಿ ಪಕ್ಷ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಸಮಾಜವಾದಿ ಸಿದ್ಧಾಂತಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದ ಈ ಶಾಸಕರು, ಕಳೆದ ಹಲವು ದಿನಗಳಿಂದ ಬಿಜೆಪಿ ಪಕ್ಷಕ್ಕಾಗಿ ಕೆಲಸ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸಮಾಜವಾದಿ ಪಕ್ಷದ ಎಲ್ಲರನ್ನೂ ಒಳಗೊಳ್ಳುವಿಕೆ ಹಾಗೂ ಪ್ರಗತಿಪರ ಸಿದ್ಧಾಂತಗಳಿಗೆ ವಿರುದ್ಧವಾಗಿ ಕೋಮುವಾದಿ, ವಿಭಜನಕಾರಿ ಹಾಗೂ ನಕಾರಾತ್ಮಕ ಸೈದ್ಧಾಂತಿಕತೆಗಳನ್ನು ಅನುಮೋದಿಸಿದ ಕಾರಣಕ್ಕಾಗಿ ಈ ಮೂವರು ಶಾಸಕರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಸಮಾಜವಾದಿ ಪಕ್ಷ ಸಮರ್ಥಿಸಿಕೊಂಡಿದೆ.