image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಾಜಿ ಸಿಎಂ ಜಗನ್ ಅವರ ವಾಹನಕ್ಕೆ ಸಿಲುಕಿ ವ್ಯಕ್ತಿ ಸಾವು : ಪೊಲೀಸರಿಂದ ಪ್ರಕರಣ ದಾಖಲು

ಮಾಜಿ ಸಿಎಂ ಜಗನ್ ಅವರ ವಾಹನಕ್ಕೆ ಸಿಲುಕಿ ವ್ಯಕ್ತಿ ಸಾವು : ಪೊಲೀಸರಿಂದ ಪ್ರಕರಣ ದಾಖಲು

ಆಂಧ್ರ ಪ್ರದೇಶ : ರ್‍ಯಾಲಿಯಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಪ್ರಕರಣದಲ್ಲಿ ಆಂಧ್ರದ ಮಾಜಿ ಮುಖ್ಯಮಂತ್ರಿ ವೈ.ಎಸ್.ಜಗನ್​ ಮೋಹನ್​ ರೆಡ್ಡಿ ಮತ್ತು ಅವರ ಐವರು ಸಹಾಯಕರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಜಗನ್​ ಪ್ರಯಾಣಿಸುತ್ತಿದ್ದ ವಾಹನವೇ ವ್ಯಕ್ತಿಯ ಸಾವಿಗೆ ಕಾರಣವಾಗಿದೆ ಎಂದು ಪೊಲೀಸರು ನಡೆಸಿದ ತನಿಖೆಯಲ್ಲಿ ದೃಢಪಟ್ಟಿದೆ.

55 ವರ್ಷದ ವ್ಯಕ್ತಿ ಸಾವನ್ನಪ್ಪಿದ ಕುರಿತು ಅವರ ಪತ್ನಿ ಚೀಲಿ ಲುರ್ದು ಮೆರಿ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅದರ ಆಧಾರದ ಮೇಲೆ ಆರಂಭದಲ್ಲಿ ಬಿಎನ್​ಎಸ್ ಸೆಕ್ಷನ್​ 106 (1)ರ ಅಡಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಸೆಕ್ಷನ್​ 105 (ಕೊಲೆಗೆ ಸಮನಾಗದ ಅಪರಾಧಿಕ ನರಹತ್ಯೆ) ಮತ್ತು 49 (ಮಾನವ ಜೀವ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯ ಉಂಟುಮಾಡುವ ಕೃತ್ಯ) ಅಡಿಯಲ್ಲಿ ಪ್ರಕರಣವನ್ನು ಪೊಲೀಸರು ಮರು ವರ್ಗೀಕರಿಸಿದ್ದಾರೆ.

ಜೂನ್ 18ರಂದು ಜಗನ್ ಅವರ ಬೆಂಗಾವಲು ಪಡೆ ಮತ್ತು ಮೂರು ವಾಹನಗಳಿಗೆ ಮಾತ್ರ ತಡೆಪಲ್ಲಿಯಿಂದ ಸತ್ತೇನಪಲ್ಲಿಗೆ ಪ್ರಯಾಣಿಸಲು ಅನುಮತಿ ನೀಡಲಾಗಿತ್ತು. ನಲ್ಲಪಾಡು ಪೊಲೀಸ್ ಠಾಣಾ ವ್ಯಾಪ್ತಿಯ ಎಟುಕುರು ಬೈಪಾಸ್‌ನ ಬಳಿ ಬೆಂಗಾವಲು ವಾಹನ ಹಾದು ಹೋಗುವಾಗ ರಸ್ತೆ ಅಪಘಾತ ಸಂಭವಿಸಿದೆ. ಘಟನೆಯ ಮಾಹಿತಿ ಪಡೆದ ಪೊಲೀಸರು ತಕ್ಷಣ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದರೂ ಮಾರ್ಗಮಧ್ಯೆ ಅವರು ಸಾವನ್ನಪ್ಪಿದ್ದರು.

ಸಾವನ್ನಪ್ಪಿದ ಚೀಲಿ ಸಿಂಗಯ್ಯನವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇದೀಗ, ಕಾರು ಚಾಲಕ ರಮಣ ರೆಡ್ಡಿ, ಮಾಜಿ ಸಿಎಂ ವೈ.ಎಸ್.ಜಗನ್ ಮೋಹನ್ ರೆಡ್ಡಿ, ಆಪ್ತ ಸಹಾಯಕ ಕೆ.ನಾಗೇಶ್ವರ ರೆಡ್ಡಿ, ಮಾಜಿ ಸಂಸದ ವೈ.ವಿ.ಸುಬ್ಬಾ ರೆಡ್ಡಿ, ಮಾಜಿ ಶಾಸಕ ಪೆರ್ನಿ ನಾನಿ ವೆಂಕಟೇಶ್ವರ ರಾವ್ ಮತ್ತು ಮಾಜಿ ಸಚಿವೆ ವಿದಾದಲ ರಜಿನಿ ಸೇರಿದಂತೆ ಆರು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

Category
ಕರಾವಳಿ ತರಂಗಿಣಿ