ಪಂಜಾಬ್ : ಪಂಜಾಬ್ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಪಾಕಿಸ್ತಾನದ ಐಎಸ್ಐ ಪರ ಕೆಲಸ ಮಾಡುತ್ತಿದ್ದ ಇಬ್ಬರು ಬೇಹುಗಾರರನ್ನು ಹೆಡೆಮುರಿ ಕಟ್ಟಿದ್ದಾರೆ. ಈ ಬಂಧಿತರಿಗೆ ಪಾಕ್ನ ಐಎಸ್ಐ ಏಜೆಂಟರ ಜೊತೆ ನೇರ ಸಂಪರ್ಕ ಇದ್ದು, ವಾಟ್ಸಪ್ ಮೂಲಕ ಗುಪ್ತಚರ ಮಾಹಿತಿಯನ್ನು ರವಾನಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಭಾರತದಲ್ಲಿ ಇದ್ದು ಪಾಕಿಸ್ತಾನ ಪರ ಕೆಲಸ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಗರುಪ್ರೀತ್ ಸಿಂಗ್ ಅಲಿಯಾಸ್ ಗೋಪಿ ಫೌಜಿ ಮತ್ತು ಸಾಹಿಲ್ ಮಸಿಹ್ ಅಲಿಯಾಸ್ ಸಾಹಿಲ್ ಎಂದು ಗುರುತಿಸಲಾಗಿದೆ. ಅಮೃತಸರದ ಗ್ರಾಮೀಣ ಠಾಣೆ ಪೊಲೀಸರು ಇವರನ್ನು ಬಂಧಿಸಿದ್ದಾರೆ. ಈ ಕುರಿತು ಮಾತನಾಡಿರುವ ಪಂಜಾಬ್ ಡಿಜಿಪಿ ಗೌರವ್ ಯಾದವ್, ಪ್ರಾಥಮಿಕ ತನಿಖೆ ಪ್ರಕಾರ ಬಂಧಿತ ಆರೋಪಿಗಳು ಪಾಕಿಸ್ತಾನದ ಐಎಸ್ಐ ಜೊತೆ ಲಿಂಕ್ ಹೊಂದಿರುವ ಆರೋಪವಿದೆ. ಇವರು ಭಾರತದ ಗುಪ್ತಚರ ಮಾಹಿತಿಯನ್ನು ಐಎಸ್ಐಗೆ ಒದಗಿಸುತ್ತಿದ್ದರು. ಗುರುಪ್ರೀತ್ ಸಿಂಗ್, ಐಎಸ್ಐ ಜೊತೆ ನೇರ ಸಂಪರ್ಕ ಹೊಂದಿರುವುದು ಗೊತ್ತಾಗಿದೆ. ಈತ ಭದ್ರತಾ ವ್ಯವಸ್ಥೆಯ ಸೂಕ್ಮ ಮತ್ತು ಗುಪ್ತ ಮಾಹಿತಿಯನ್ನು ಪೆನ್ ಡ್ರೈವ್ ಮೂಲಕ ಹಂಚಿಕೊಂಡಿದ್ದಾನೆ. ಇದರಲ್ಲಿ ಐಎಸ್ಐನ ಪ್ರಮುಖ ಹ್ಯಾಂಡಲರ್ ರಾಣಾ ಜಾವೇದ್ ಪಾತ್ರವಿದೆ ಎಂದು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ. ಬೇಹುಗಾರಿಕೆಗೆ ವಾಟ್ಸಪ್ ವಿಡಿಯೋ ಕಾಲ್ ಮೂಲಕ ಐಎಸ್ಐ ಜೊತೆ ಸಂಪರ್ಕ ಸಾಧಿಸಿರುವುದು ಬಯಲಾಗಿದೆ. ಅವರ ಫೋನ್ಗಳನ್ನು ಫಾರಿನ್ಸಿಕ್ ಪರೀಕ್ಷೆ ಮತ್ತು ಸೈಬರ್ ತನಿಖೆಗೆ ರವಾನಿಸಲಾಗಿದೆ. ಅವರ ಸಹಚರರನ್ನು ಪತ್ತೆಹಚ್ಚಲಾಗುವುದು. ಆರೋಪಿಗಳ ಬಂಧನದಿಂದ ಬೇಹುಗಾರಿಕೆ-ಭಯೋತ್ಪಾದಕ ಜಾಲ ಭೇದಿಸಲು ನೆರವಾಗಲಿದೆ ಎಂದು ಡಿಜಿಪಿ ಮಾಹಿತಿ ನೀಡಿದರು.