ವಾಷಿಂಗ್ಟನ್ : ಇರಾನ್‌ನ ಮೂರು ಪರಮಾಣು ಸ್ಥಾವರಗಳ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದ ನಂತರ ಅಲ್ಲಿ ವಿಕಿರಣ ಹೊರಸೂಸಿಲ್ಲ ಎಂದು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA) ಭಾನುವಾರ ದೃಢಪಡಿಸಿದೆ. ಅಣ್ವಸ್ತ್ರ ಬಾಂಬ್ ತಯಾರಿಸಲು ಇರಾನ್ ಯುರೇನಿಯಂ ಶೇಖರಣೆ ಮಾಡಿಟ್ಟಿದ್ದ ಘಟಕಗಳ ಮೇಲೆ ಅಮೆರಿಕ ಭಾನುವಾರ ಬಿ-2 ಬಾಂಬರ್, ಬಂಕರ್ ಬಸ್ಟರ್ ಬಾಂಬ್ಗಳಿಂದ ಅವುಗಳನ್ನು ನಾಶ ಮಾಡಿದೆ. ಇದರಿಂದ ವಿಕಿರಣ ಹೊರಸೂಸುವ ಭೀತಿ ಉಂಟಾಗಿತ್ತು. ಇದಕ್ಕೆ ಸ್ಪಷ್ಟನೆ ನೀಡಿರುವ ಐಎಇಎ, ಇರಾನ್‌ನ ಪರಮಾಣು ತಾಣಗಳ ಮೇಲೆ ಇತ್ತೀಚೆಗೆ ನಡೆದ ದಾಳಿಗಳಿಂದ ಆ ಪ್ರದೇಶದಲ್ಲಿ ವಿಕಿರಣಗಳು ಹೊರಬಂದಿಲ್ಲ. ಈ ಬಗ್ಗೆ ಮತ್ತಷ್ಟು ಪರಿಶೀಲನೆ ನಡೆಸಲಾಗುತ್ತಿದೆ ಎಂದು ತನ್ನ ಸಂಸ್ಥೆಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ನಟಾಂಜ್, ಇಸ್ಫಹಾನ್ ಮತ್ತು ಫೋರ್ಡೋದಲ್ಲಿನ ಪರಮಾಣು ಘಟಕಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಮತ್ತು ಇಸ್ರೇಲ್ ಭೀಕರ ದಾಳಿ ನಡೆಸಿವೆ. ಇರಾನ್ ಈ ದಾಳಿಗಳನ್ನು ಖಂಡಿಸಿದೆ. ಈ ಕೃತ್ಯವು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಕರೆದಿದೆ. ಆದಾಗ್ಯೂ, ತನ್ನ ಪರಮಾಣು ಕಾರ್ಯಕ್ರಮವನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದೆ. AEOI ಹೇಳಿಕೆ ಬಿಡುಗಡೆ ಮಾಡಿದ್ದು, "ಭಾನುವಾರ ಮುಂಜಾನೆ ಇರಾನ್‌ನ ಪರಮಾಣು ತಾಣಗಳು ಭೀಕರ ಆಕ್ರಮಣಕ್ಕೆ ಒಳಗಾಗಿವೆ. ಇದು ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣ ರಹಿತ ಒಪ್ಪಂದ ಮತ್ತು ಅಂತಾರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯಾಗಿದೆ. ಈ ದಾಳಿಯು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ (IAEA) ಉದಾಸೀನತೆ ಮತ್ತು ಅಶಕ್ತತೆಗೆ ಸಾಕ್ಷಿ" ಎಂದು ಕಿಡಿಕಾರಿದೆ. ಈ ದಾಳಿಯನ್ನು ಖಂಡಿಸಿರುವ ಇರಾನ್‌ನ ಪರಮಾಣು ಶಕ್ತಿ ಸಂಸ್ಥೆಯು, "ದುರುದ್ದೇಶಪೂರಿತ ಪಿತೂರಿ, ವಿಜ್ಞಾನಿಗಳು ಮತ್ತು ತಜ್ಞರ ಹತ್ಯೆಯ ನಂತರವೂ ಪರಮಾಣು ಕಾರ್ಯಕ್ರಮ ಮುಂದುವರಿಯಲಿದೆ. ಇರಾನ್‌ನ ಜನರ ಹಕ್ಕುಗಳನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ" ಎಂದು ಹೇಳಿದೆ.