ಕೇರಳ : ಇಂಧನ ಕಡಿಮೆಯಾದ ಹಿನ್ನೆಲೆಯಲ್ಲಿ ಜೂನ್ 14 ರಂದು ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಬ್ರಿಟಿಷ್ ಯುದ್ಧ ವಿಮಾನದಲ್ಲಿ ದೋಷ ಕಂಡು ಬಂದಿದ್ದರಿಂದ ಕಳೆದ ಒಂದು ವಾರದಿಂದ ಹಾರಾಟ ಸಾಧ್ಯವಾಗಿಲ್ಲ. ದೋಷವನ್ನು ಸರಿಪಡಿಸಲು ಬ್ರಿಟಿಷ್ ತಂತ್ರಜ್ಞರು ಶೀಘ್ರದಲ್ಲೇ ಆಗಮಿಸುವ ನಿರೀಕ್ಷೆಯಿದೆ ಎಂದು ತಿರುವನಂತಪುರಂ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಇಂಡೋ - ಪೆಸಿಫಿಕ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ F-35B ಬ್ರಿಟಿಷ್ ಯುದ್ಧ ವಿಮಾನದಲ್ಲಿ ಇಂಧನ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ಕಳೆದ ಶನಿವಾರ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿತ್ತು.
ಲ್ಯಾಂಡಿಂಗ್ ಬಳಿಕ ತಪಾಸಣೆಯಲ್ಲಿ ವಿಮಾನದ ಹೈಡ್ರಾಲಿಕ್ ವ್ಯವಸ್ಥೆಯಲ್ಲಿ ದೋಷ ಕಂಡುಬಂದಿತ್ತು. ನಂತರ ವಿಮಾನದ ದೋಷವನ್ನು ಸರಿಪಡಿಸಲು ವಿಮಾನದ ಮೂವರು ಎಂಜಿನಿಯರ್‌ಗಳು ಮತ್ತು ಪೈಲಟ್ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದರು. ದೋಷ ಸರಿಪಡಿಸಿದ ನಂತರ, ವಿಮಾನವನ್ನು ಟೇಕ್ ಆಫ್ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಇದರಿಂದ ಬ್ರಿಟಿಷ್ ರಕ್ಷಣಾ ಸಚಿವಾಲಯವು ಹೆಚ್ಚು ಅನುಭವಿ ತಂತ್ರಜ್ಞರನ್ನು ಕಳುಹಿಸಲು ನಿರ್ಧರಿಸಿದೆ. ತಿರುವನಂತಪುರದಲ್ಲಿ ತುರ್ತು ಲ್ಯಾಂಡಿಂಗ್ ಆದ ಬ್ರಿಟಿಷ್ ನೌಕಾಪಡೆಯ F-35B, ವಿಶ್ವದ ಅತ್ಯಂತ ದುಬಾರಿ ಮತ್ತು ಅತ್ಯಾಧುನಿಕ ಯುದ್ಧ ವಿಮಾನಗಳಲ್ಲಿ ಒಂದಾಗಿದೆ. ಈ ವಿಮಾನವನ್ನು ಯುಎಸ್ ರಕ್ಷಣಾ ಕಂಪನಿ ಲಾಕ್ಹೀಡ್ ಮಾರ್ಟಿನ್ ತಯಾರಿಸಿದೆ. F-35B ಯ ಮುಂದುವರಿದ ಆವೃತ್ತಿಯಾದ F-35I ಅದಿರ್ ಯುದ್ಧ ವಿಮಾನ ಪ್ರಸ್ತುತ ಇರಾನ್-ಇಸ್ರೇಲ್ ಯುದ್ಧದಲ್ಲಿ ಇರಾನ್ ವಿರುದ್ಧದ ವಾಯುದಾಳಿಗಳಲ್ಲಿ ಮುಂಚೂಣಿಯಲ್ಲಿದೆ. F-35ಗೆ ಇಸ್ರೇಲಿ ತಂತ್ರಜ್ಞಾನ ಅಳವಡಿಸಿ F-35I ಅದಿರ್ ಯುದ್ಧ ವಿಮಾನ ತಯಾರಿಸಲಾಗಿದೆ. ಭಾರತದ ಇಂಟಿಗ್ರೇಟೆಡ್ ಏರ್ ಕಮಾಂಡ್ ಮತ್ತು ಕಂಟ್ರೋಲ್ ಸಿಸ್ಟಮ್ ಈ ವಿಮಾನದ ಉಪಸ್ಥಿತಿಯನ್ನು ಆಕಾಶದಲ್ಲಿ ಪತ್ತೆಹಚ್ಚಲು ಸಾಧ್ಯವಾಯಿತು ಎಂಬುದು ಭಾರತೀಯ ವಾಯುಪಡೆಯ ಶಕ್ತಿ ಎಂದು ಪರಿಗಣಿಸಲಾಗಿದೆ. ಸದ್ಯ ಈ ವಿಮಾನದಲ್ಲಿ ಕಂಡು ಬಂದಿರುವ ದೋಷ ನಿವಾರಿಸಲು ಸದ್ಯದಲ್ಲೇ ತಜ್ಞರು ಆಗಮಿಸಲಿದ್ದಾರೆ. ಸಿಐಎಸ್ಎಫ್ ಯೋಧರು ಸದ್ಯ ಯುದ್ಧ ವಿಮಾನಕ್ಕೆ ಭದ್ರತೆ ಒದಗಿಸಿದ್ದಾರೆ.