ಅಮೇರಿಕಾ : ಇರಾನ್‌ನಲ್ಲಿರುವ ಮೂರು ಪರಮಾಣು ಸ್ಥಾವರಗಳ ಮೇಲೆ ಅಮೆರಿಕ ಸೇನೆ ದಾಳಿ ನಡೆಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇಸ್ರೇಲ್-ಇರಾನ್ ನಡುವೆ ನಡೆಯುತ್ತಿರುವ ಭಯಾನಕ ಸಂಘರ್ಷದ ನಡುವೆ ಈ ಮಹತ್ವದ ಬೆಳವಣಿಗೆ ನಡೆದಿದೆ. ಇದರೊಂದಿಗೆ, ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕ ಅಧಿಕೃತವಾಗಿ ಮಧ್ಯಪ್ರವೇಶ ಮಾಡಿದಂತಾಗಿದೆ.
ಸಾಮಾಜಿಕ ಜಾಲತಾಣ 'ಟ್ರೂತ್'ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, 'ಅಮೆರಿಕ ಇರಾನ್‌ನ 3 ಪ್ರಮುಖ ಪರಮಾಣು ಸ್ಥಾವರಗಳಾದ ಫೋರ್ಡೋ, ನಟಾಂಜ್ ಮತ್ತು ಎಸ್ಫಹಾನ್ ಅನ್ನು ಯಶಸ್ವಿಯಾಗಿ ನಾಶಪಡಿಸಿದೆ. ಈಗ ನಮ್ಮೆಲ್ಲ ವಿಮಾನಗಳು ಇರಾನ್ ವಾಯುಪ್ರದೇಶದ ಹೊರಬಂದಿದ್ದು, ಸುರಕ್ಷಿತವಾಗಿ ಮರಳುತ್ತಿವೆ' ಎಂದು ತಿಳಿಸಿದ್ದಾರೆ. 'ನಮ್ಮ ಶ್ರೇಷ್ಠ ಯೋಧರಿಗೆ ಅಭಿನಂದನೆಗಳು. ಜಗತ್ತಿನಲ್ಲಿ ಬೇರಾವುದೇ ಸೇನೆ ಇದನ್ನು ಮಾಡಲು ಸಾಧ್ಯವಿಲ್ಲ. ಈಗ ಶಾಂತಿಯ ಸಮಯ ಬಂದಿದೆ' ಎಂದು ಅವರು ಬರೆದುಕೊಂಡಿದ್ದಾರೆ.
ಫೋರ್ಡೋದಲ್ಲಿರುವ ಭೂಗತ ಸ್ಥಳ ಮತ್ತು ಬೃಹತ್ ನಟಾಂಜ್ ಪರಮಾಣು ಸ್ಥಾವರಗಳು ಇರಾನ್‌ನ ಪ್ರಮುಖ ಎರಡು ಪ್ರಾಥಮಿಕ ಯುರೇನಿಯಂ ಸೌಲಭ್ಯಗಳಾಗಿದ್ದು, ಇವುಗಳ ಪೈಕಿ ನಟಾಂಜ್ ಎಂಬ ತಾಣವನ್ನು ವಾರದ ಆರಂಭದಲ್ಲಿ ಇಸ್ರೇಲ್ ಧ್ವಂಸಗೊಳಿಸಿತ್ತು ಎಂದು ವರದಿಯಾಗಿತ್ತು. ಅಮೆರಿಕದ ಮಿಸೌರಿಯ ವೈಟ್‌ಮ್ಯಾನ್ ವಾಯುಪಡೆ ನೆಲೆಯಿಂದ ಹಲವಾರು ಯುಎಸ್ ಬಿ-2 ಸ್ಟೆಲ್ತ್ ಬಾಂಬರ್‌ಗಳು ಪಶ್ಚಿಮ ದಿಕ್ಕಿಗೆ ಹಾರಾಟ ನಡೆಸುತ್ತಿರುವುದು ಕಂಡುಬಂದಿತ್ತು ಎಂದು ವಿಮಾನ ಟ್ರ್ಯಾಕಿಂಗ್ ಡೇಟಾ ಉಲ್ಲೇಖಿಸಿ ಸಿಎನ್‌ಎನ್ ವರದಿ ಮಾಡಿತ್ತು. ಶನಿವಾರದ ವೇಳೆ ಈ ಸಮರ ವಿಮಾನಗಳು ಪೆಸಿಫಿಕ್ ಮಹಾಸಾಗರದ ಮೇಲೆ ಹಾರುತ್ತಿದ್ದವು ಮತ್ತು ಗುವಾಮ್‌ಗೆ ಹೋಗುವ ಮಾರ್ಗದಲ್ಲೇ ಕಾಣಿಸಿಕೊಂಡಿದ್ದವು ಎಂದು ಈ ವರದಿ ಹೇಳಿತ್ತು. ಹೀಗಿದ್ದರೂ, ಇರಾನ್‌ನ ಪರಮಾಣು ತಾಣಗಳ ಮೇಲಿನ ದಾಳಿಯಲ್ಲಿ ಅಮೆರಿಕದ ಅತ್ಯಂತ ಶಕ್ತಿಶಾಲಿ ಬಿ-2 ಬಾಂಬರ್‌ಗಳು ಭಾಗವಾಗಿದ್ದವೇ ಎಂಬುದು ಇನ್ನೂ ದೃಢಪಟ್ಟಿಲ್ಲ.