ಜಮ್ಮು ಮತ್ತು ಕಾಶ್ಮೀರ : ಭವಿಷ್ಯದಲ್ಲಿ ಭಾರತದ ಮಣ್ಣಿನಲ್ಲಿ ಭಯೋತ್ಪಾದಕ ದಾಳಿ ನಡೆಸಿದರೆ ಭಾರೀ ಪರಿಣಾಮ ಎದುರಿಸಬೇಕಾಗುತ್ತದೆ. ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ. ಭಾರತ ಭಯೋತ್ಪಾದನೆ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಿದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆ ಸೇನೆಯ ಉತ್ತರ ಕಮಾಂಡ್‌ನ ಪಡೆಗಳ ಜೊತೆ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಭಾರತದ ವಿರುದ್ಧ ಸಾವಿರಾರು ಕುತಂತ್ರ ನೀತಿ ನಡೆಸಿದರೂ ಅದು ಯಶಸ್ವಿಯಾಗುವುದಿಲ್ಲ ಎಂಬುದು ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನಕ್ಕೆ ಮನವರಿಕೆಯಾಗಿದೆ ಎಂದು ತಿಳಿಸಿದರು.
ಆಪರೇಷನ್ ಸಿಂಧೂರ್ ಬಳಿಕ ರಕ್ಷಣಾ ಸಚಿವರು ಎರಡನೇ ಬಾರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಈ ಯೋಗ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವರ ಜೊತೆಗೆ ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಕೂಡ ಭಾಗಿಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ. ಈ ಕಾರ್ಯಾಚರಣೆಯ ಮೂಲಕ ನಾವು ಭಯೋತ್ಪಾದನೆಯನ್ನು ಸಹಿಸುವುದಿಲ್ಲ. ಪಾಕಿಸ್ತಾನ ಭಯೋತ್ಪಾದನೆಯನ್ನು ಮುಂದುವರೆಸಿದರೆ, ಅದು ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಆಪರೇಷನ್ ಸಿಂಧೂರ್ ಕೇವಲ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಲ್ಲ. 2016ರ ಸರ್ಜಿಕಲ್ ಸ್ಟ್ರೈಕ್ ಮತ್ತು 2019ರ ಬಾಲಾಕೋಟ್ ವಾಯು ದಾಳಿಯ ಮುಂದುವರಿದ ಭಾಗವಾಗಿತ್ತು. ಭಾರತದ ಮಣ್ಣಿನ ಮೇಲೆ ನಡೆಸುವ ಯಾವುದೇ ಯುದ್ಧವು ಪಾಕಿಸ್ತಾನಕ್ಕೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಭಯೋತ್ಪಾದನೆ ವಿರುದ್ಧ ಭಾರತ ಯಾವುದೇ ರೀತಿಯ ಕ್ರಮಕ್ಕೂ ಸಿದ್ಧವಾಗಿದೆ ಎಂಬ ಖಡಕ್ ಸಂದೇಶ ರವಾನಿಸಿದರು.
ಆಪರೇಷನ್ ಸಿಂಧೂರ್ನ ಭಾಗವಾಗಿ, ಭಾರತೀಯ ಸೇನೆಯಿಂದ ಗಡಿಯಲ್ಲಿದ್ದ ಭಯೋತ್ಪಾದಕ ಅಡುಗುತಾಣಗಳ ಮೇಲೆ ನಿಖರವಾಗಿ ದಾಳಿ ಮಾಡಲಾಗಿದೆ. ನಾವು ಸುಲಭವಾಗಿ ಗುರಿ ಇಟ್ಟು ದಾಳಿ ಮಾಡಬಹುದಾಗಿತ್ತು. ಆದರೆ, ನಾವು ನಾವು ಸಂಯಮವನ್ನು ಕಾಪಾಡಿದ್ದೇವೆ ಎಂದರು. ಯೋಗವು ಕೋಪದಿಂದ ಹೊರಬರಲು ಸಹಾಯ ಮಾಡುತ್ತದೆ. ಇದು ದೈಹಿಕ ಮತ್ತು ಮಾನಸಿಕವಾಗಿ ಬಲಗೊಳಿಸುತ್ತದೆ ಎಂದು ಅವರು ತಿಳಿಸಿದರು. ಪಹಲ್ಗಾಮ್ ದಾಳಿಯನ್ನು ಗಡಿಯಯಾದ್ಯಂತ ನಡೆಸಲು ಯೋಜಿಸಲಾಗಿತ್ತು. ಇದು ಕೇವಲ ಭಯೋತ್ಪಾದಕ ದಾಳಿಯಲ್ಲ. ಬದಲಾಗಿ ಭಾರತದಲ್ಲಿ ಸಾಮಾಜಿಕ ಮತ್ತು ಕೋಮು ಸೌಹಾರ್ದತೆಯನ್ನು ಕದಡಿಸುವ ಗುರಿಯನ್ನು ಹೊಂದಿತು. ನಾವು ಅವರ ಯೋಜನೆಯನ್ನು ಮಾತ್ರ ಹಾಳು ಮಾಡಲಿಲ್ಲ. ಪಾಕಿಸ್ತಾನ ವಿರುದ್ಧ ಕಠಿಣ ಕ್ರಮ ಕೈಗೊಂಡು, ಆಪರೇಷನ್ ಸಿಂಧೂರ್ ನಡೆಸಿದೆವು ಎಂದರು.