ನವದೆಹಲಿ: ತಮಿಳುನಾಡಿನ ಮಧುರೈನಲ್ಲಿ ಸೂಕ್ತ ಅನುಮತಿಯಿಲ್ಲದೇ ನಿರ್ಮಿಸಲಾಗಿದೆ ಎಂದು ಹೇಳಲಾದ ದೇವಾಲಯವೊಂದರ ಧ್ವಂಸವನ್ನು ತಡೆ ಹಿಡಿಯಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ಧರಿಸಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಉಜ್ಜಲ್ ಭೂಯಾನ್ ಮತ್ತು ಮನಮೋಹನ್ ಅವರನ್ನೊಳಗೊಂಡ ಪೀಠವು ಇಂದು ಈ ಕುರಿತ ಅರ್ಜಿಯ ವಿಚಾರಣೆ ನಡೆಸಿ, ದೇವಾಲಯ ಧ್ವಂಸಕ್ಕೆ ತಡೆ ಹಾಕಿದೆ. ಅಲ್ಲದೇ ದೇವಾಲಯ ಧ್ವಂಸಕ್ಕೆ ತಡೆ ನೀಡಬೇಕೆಂದು ಮಧುರೈನಲ್ಲಿರುವ ವಿಸ್ತಾರಾ ವೆಲ್ಫೇರ್ ಅಸೋಸಿಯೇಷನ್ ಮೂಲಕ ನಿವಾಸಿಗಳು ಸಲ್ಲಿಸಿದ ಅರ್ಜಿಯ ಕುರಿತು ಪ್ರತಿಕ್ರಿಯೆ ನೀಡುವಂತೆ ಸ್ಥಳೀಯ ಆಡಳಿತ ಸಂಸ್ಥೆಗೆ ಪೀಠ ಸೂಚಿಸಿತು. ದೇವಾಲಯದ ಧ್ವಂಸಕ್ಕೆ ನಿರ್ದೇಶಿಸಿ ಮದ್ರಾಸ್ ಹೈಕೋರ್ಟ್ ಹೊರಡಿಸಿದ ಆದೇಶದ ವಿರುದ್ಧ ಸಂಘವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ದೇವಾಲಯದ ಧ್ವಂಸಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಆದರೆ ದೇವಾಲಯದ ಧ್ವಂಸಕ್ಕೆ ತಡೆ ನೀಡಲಾಗುವುದು ಎಂದು ಪೀಠ ಹೇಳಿದೆ. ವಿಚಾರಣೆ ವೇಳೆ ನಿವಾಸಿಗಳ ಸಂಸ್ಥೆಯ ವಾದವನ್ನು ಪೀಠ ಪರಿಗಣಿಸಿತು. ನಿವಾಸಿಗಳನ್ನು ಪ್ರತಿನಿಧಿಸಿದ ಹಿರಿಯ ವಕೀಲ ದಾಮ ಶೇಷಾದ್ರಿ ನಾಯ್ಡು, ಹೈಕೋರ್ಟ್ ಎರಡೂ ಕಡೆಯವರಿಗೆ ವಿಚಾರಣೆಗೆ ಅವಕಾಶ ನೀಡಲಿಲ್ಲ ಮತ್ತು ಅರ್ಜಿಗಳು ಸಹ ಪೂರ್ಣಗೊಂಡಿಲ್ಲ ಎಂದು ಪೀಠದ ಮುಂದೆ ವಾದಿಸಿದರು. ಅಪಾರ್ಟ್ಮೆಂಟ್ನ ತೆರೆದ ಜಾಗ ಎಂದು ಮೀಸಲಿಟ್ಟ ಸ್ಥಳದಲ್ಲಿ ಅನುಮತಿಯಿಲ್ಲದೇ ದೇವಾಲಯವನ್ನು ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತ ಪ್ರಕರಣ ಮಧುರೈ ಹೈಕೋರ್ಟ್ ಮೆಟ್ಟಿಲೇರಿತ್ತು. ಅಪಾರ್ಟ್ಮೆಂಟ್ ಮಾಲೀಕರ ಸಂಘವು ತೆರೆದ ಜಾಗದಲ್ಲಿ ದೇವಾಲಯ ನಿರ್ಮಾಣಕ್ಕೆ ಯಾವುದೇ ಅನುಮತಿ ನೀಡಲು ಸಾಧ್ಯವಿಲ್ಲ ಎಂದು, ದೇವಾಲಯವನ್ನು ಕೆಡವಲು ನಿರ್ದೇಶಿಸಿ ಹೈಕೋರ್ಟ್ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.