ನವದೆಹಲಿ : ಇಸ್ರೇಲ್ ಮತ್ತು ಇರಾನ್ ನಡುವೆ ಉದ್ವಿಗ್ನತೆ ಏರ್ಪಟ್ಟಿರುವ ಬೆನ್ನಲ್ಲೇ ಅಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರನ್ನು ಕರೆತರುವ ಪ್ರಯತ್ನ ಸಾಂಗವಾಗಿ ಸಾಗಿದೆ. ಇದೀಗ ಈ ನಿಟ್ಟಿನಲ್ಲಿ ಇರಾನ್ ತನ್ನ ವಾಯುಪ್ರದೇಶವನ್ನು ಭಾರತಕ್ಕೆ ಮಾತ್ರ ತೆರೆದಿದೆ. ಹೀಗಾಗಿ, ಭಾರತದ ಏರ್ ಚಾರ್ಟಡ್ ವಿಮಾನಗಳು ಆಪರೇಷನ್ ಸಿಂಧೂ ಕಾರ್ಯಾಚರಣೆ ಮೂಲಕ 1000 ಮಂದಿ ಭಾರತೀಯರನ್ನು ಕರೆತರಲು ಮುಂದಾಗಿದ್ದು, ಶುಕ್ರವಾರ ರಾತ್ರಿ ಮತ್ತೊಂದು ವಿಮಾನ ದೆಹಲಿಗೆ ತಲುಪಲಿದೆ. ಅವರು ಆಪರೇಷನ್ ಸಿಂಧೂ ಭಾಗವಾಗಿ ವಿಶೇಷ ವಿಮಾನಗಳಲ್ಲಿ ಮನೆಗೆ ತಲುಪಲಿದ್ದಾರೆ. ಇರಾನ್‌ನ ಹಲವಾರು ನಗರಗಳಿಂದ ಭಾರತಕ್ಕೆ ವಿಶೇಷ ವಿಮಾನಗಳನ್ನು ವ್ಯವಸ್ಥೆ ಮಾಡಿದೆ ಎಂದು ವರದಿಯಾಗಿದೆ. ಏತನ್ಮಧ್ಯೆ, ಇರಾನ್‌ನಲ್ಲಿ 10,000 ಭಾರತೀಯರಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಪೈಕಿ 1,500 ರಿಂದ 2,000 ವಿದ್ಯಾರ್ಥಿಗಳು, ಇನ್ನೂ 6,000 ಜನರು ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೊಂದಿಗೆ, ಅಲ್ಲಿನ ಹಡಗು ಕಂಪನಿಗಳಲ್ಲಿ ಕೆಲಸ ಮಾಡುವ ಅನೇಕ ನಾವಿಕರು ಸಹ ಇದ್ದಾರೆ. ಭದ್ರತಾ ಕಾರಣಗಳಿಂದಾಗಿ ಇರಾನ್ ಅವರನ್ನು ತನ್ನ ದೇಶವನ್ನು ದಾಟಲು ಅನುಮತಿಸಿರಲಿಲ್ಲ.
ಒಂದು ವಾರದ ಹಿಂದೆ, ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್‌ನಲ್ಲಿ ಹಲವಾರು ನೆಲೆಗಳು ನಾಶವಾಗಿವೆ. ಇರಾನ್ ಇಸ್ರೇಲ್ ವಿರುದ್ಧ ಕ್ಷಿಪಣಿಗಳು ಮತ್ತು ಡ್ರೋನ್‌ಗಳಿಂದ ಪ್ರತಿದಾಳಿ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿತು. ಈ ಸಂದರ್ಭದಲ್ಲಿ, ತನ್ನ ವಾಯುಪ್ರದೇಶವನ್ನು ಮುಚ್ಚಿದ್ದರಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಅದಾಗ್ಯೂ, ಈಗ ಇರಾನ್ ಭಾರತೀಯರನ್ನು ಸ್ಥಳಾಂತರಿಸಲು ವಿಶೇಷ ವಿನಾಯಿತಿ ನೀಡಿದೆ ಮತ್ತು ಸ್ಥಳಾಂತರಿಸುವ ಪ್ರಕ್ರಿಯೆ ನಡೆಯಲಿದೆ. ಹೀಗಾಗಿ, ಭಾರತೀಯರು ಮನೆಗೆ ಮರಳಲು ಅನುಕೂಲವಾಗಿದೆ. ಇರಾನ್‌ನಿಂದ ಇನ್ನೂ ಎರಡು ವಿಮಾನಗಳು ಶನಿವಾರ ದೆಹಲಿಗೆ ಆಗಮಿಸಲಿವೆ. ಈಗಾಗಲೇ ಇರಾನ್ ನಿಂದ 110 ವಿದ್ಯಾರ್ಥಿಗಳು ಭಾರತಕ್ಕೆ ಆಗಮಿಸಿದ್ದಾರೆ. ಇವರನ್ನು ಮೊದಲಿಗೆ ಇರಾನ್ ನಿಂದ ಅರ್ಮೆನಿಯಾಕ್ಕೆ ಕಳುಹಿಸಿ ಅಲ್ಲಿಂದ ಅವರನ್ನು ಭಾರತಕ್ಕೆ ಕರೆ ತರಲಾಗಿತ್ತು. ಅವರು ಜೂನ್ 18 ರ ಮಧ್ಯಾಹ್ನ ಅಲ್ಲಿಂದ ವಿಶೇಷ ವಿಮಾನದಲ್ಲಿ ಹೊರಟು ಗುರುವಾರ ಮುಂಜಾನೆ ದೆಹಲಿಯಲ್ಲಿ ಸುರಕ್ಷಿತವಾಗಿ ಬಂದಿಳಿದಿದ್ದರು. ಇದಾದ ಬಳಿಕ ಇದು ಭಾರತಕ್ಕೆ ಆಗಮಿಸಲಿರುವ ಎರಡನೇ ವಿಮಾನವಾಗಲಿದೆ.