ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನದ ಸೇನಾ ಸಂಘರ್ಷದಲ್ಲಿ ಅಮೆರಿಕ ಅಧ್ಯಕ್ಷ ರಾಜತಾಂತ್ರಿಕತೆ ಹಸ್ತಕ್ಷೇಪ ಮತ್ತು ಪ್ರಮುಖ ನಾಯಕತ್ವ ಉಲ್ಲೇಖಿಸಿ ಪಾಕಿಸ್ತಾನ ಸರ್ಕಾರ ಡೋನಾಲ್ಡ್ ಟ್ರಂಪ್ ಅವರನ್ನು 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಪಾಕಿಸ್ತಾನ ಔಪಚಾರಿಕವಾಗಿ ಶಿಫಾರಸು ಮಾಡಲು ನಿರ್ಧರಿಸಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಈ ವರದಿ ಬೆನ್ನಲ್ಲೇ ತಮ್ಮ ಸಾಮಾಜಿಕ ಜಾಲತಾಣ ಟ್ರೂಥ್ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಟ್ರಂಪ್, ಏನೇ ಮಾಡಿದರೂ ನನಗೆ ನೊಬೆಲ್ ಪ್ರಶಸ್ತಿ ಬರುವುದಿಲ್ಲ ಎಂದು ಮಾರ್ಮಿಕವಾಗಿ ತಿಳಿಸಿದ್ದಾರೆ.
ಭಾರತ - ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದಕ್ಕೆ ಅಥವಾ ರಷ್ಯಾ ಮತ್ತು ಉಕ್ರೇನ್ ಹಾಗೂ ಇಸ್ರೇಲ್- ಇರಾನ್ ಸಂಘರ್ಷ ತಡೆಯಲು ಯಾವುದೇ ಪ್ರಯತ್ನಕ್ಕೂ ತಮಗೆ ನೊಬೆಲ್ ಪ್ರಶಸ್ತಿ ಬರುವುದಿಲ್ಲ ಎಂದಿದ್ದಾರೆ. ಕಾಂಗೋ - ರುವಾಂಡೋ ನಡುವಿನ ಯುದ್ಧದಲ್ಲಿ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೊಬಿಯೊ ಅವರೊಂದಿಗೆ ಅದ್ಭುತ ಒಪ್ಪಂದ ಮಾಡಿಸಿದ್ದೇನೆ ಎಂದು ಹೇಳಲು ಸಂತೋಷವಾಗಿದೆ ಎಂದು ಪೋಸ್ಟ್ನ ಆರಂಭದಲ್ಲಿ ತಿಳಿಸಿದ್ದಾರೆ. ಆಫ್ರಿಕಾಗೆ ಅದ್ಭುತ ದಿನ. ಜಗತ್ತಿಗೆ ಅದ್ಭುತ ದಿನ ಎಂದು ತಿಳಿಸಿದ ಅವರು, ಮುಂದುವರೆದು, ನಾನು ಯಾವುದೇ ಪ್ರಯತ್ನ ನಡೆಸಿದರೂ ನೊಬೆಲ್ ಪ್ರಶಸ್ತಿ ಸಿಗುವುದಿಲ್ಲ ಎಂದಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದಕ್ಕೆ ನನಗೆ ನೊಬೆಲ್ ಪ್ರಶಸ್ತಿ ಸಿಗುವುದಿಲ್ಲ. ಸೆರೆಬಿಯಾ ಮತ್ತು ಕೊಸೊವೊ ನಡುವಿನ ಯುದ್ಧ ನಿಲ್ಲಿಸಿದಕ್ಕೆ ಕೂಡ ನೊಬೆಲ್ ಪ್ರಶಸ್ತಿ ಸಿಗುವುದಿಲ್ಲ ಎಂದಿದ್ದಾರೆ. ಈ ಮೂಲಕ ಅವರು ಹಲವು ಅಂತಾರಾಷ್ಟ್ರೀಯ ಬಿಕ್ಕಟ್ಟುಗಳನ್ನು ಪರಿಹಾರ ಮಾಡಿದ್ದಕ್ಕೆ, ಮಧ್ಯಪ್ರಾಚ್ಯದಲ್ಲಿ ಅಬ್ರಹಾಂ ಒಪ್ಪಂದಗಳನ್ನು ಮಾಡಿದ್ದಕ್ಕೆ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗುವುದಿಲ್ಲ ಎಂದು ಹೇಳಿದ್ದಾರೆ.