image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕರ್ನಾಟಕದೊಂದಿಗಿನ ಗಡಿ ವಿವಾದ : ಮಹಾರಾಷ್ಟ್ರ ಸರ್ಕಾರದಿಂದ ಉನ್ನತಾಧಿಕಾರಿಗಳ ಸಮಿತಿಯ ಪುನರ್​​ರಚನೆ

ಕರ್ನಾಟಕದೊಂದಿಗಿನ ಗಡಿ ವಿವಾದ : ಮಹಾರಾಷ್ಟ್ರ ಸರ್ಕಾರದಿಂದ ಉನ್ನತಾಧಿಕಾರಿಗಳ ಸಮಿತಿಯ ಪುನರ್​​ರಚನೆ

ಮಹಾರಾಷ್ಟ್ರ : ಕರ್ನಾಟಕದೊಂದಿಗಿನ ಗಡಿ ವಿವಾದ ಪರಿಹಾರಕ್ಕಾಗಿ ಮಹಾರಾಷ್ಟ್ರ ಸರ್ಕಾರ ರಚಿಸಿರುವ ಉನ್ನತಾಧಿಕಾರಿಗಳ ಸಮಿತಿಯನ್ನು ಪುನರ್​​ರಚಿಸಲಾಗಿದೆ. ಮಹಾ ಸರ್ಕಾರ ಹೊರಡಿಸಿರುವ ನಿರ್ಣಯದ ಪ್ರಕಾರ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ನೇತೃತ್ವದಲ್ಲಿ ಸಮಿತಿಯನ್ನು ಪುನರ್​ರಚಿಸಲಾಗಿದೆ. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ನಿರ್ಣಾಯಕ ನಿರ್ಧಾರಗಳನ್ನು ಪಕ್ಷಾತೀತ ಮತ್ತು ಪ್ರಾತಿನಿಧಿಕ ಸಂಸ್ಥೆಯು ಒಮ್ಮತದಿಂದ ತೆಗೆದುಕೊಳ್ಳಬೇಕಾಗಿದ್ದು ಸಮಿತಿಯನ್ನು ಪುನರ್​ರಚಿಸಲಾಗಿದೆ ಎಂದು ತಿಳಿಸಲಾಗಿದೆ.

ಈ ಸಮಿತಿಯನ್ನು ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಕ್ಷಣ ಕಾಲದಿಂದ ಕಾಲಕ್ಕೆ ಪುನರ್​ರಚಿಸಲಾಗುತ್ತಿದೆ. 2022ರ ನವೆಂಬರ್​ 22ರಂದು ಮಹಾಯುತಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿಯಾಗಿದ್ದ ಏಕನಾಥ್​ ಶಿಂಧೆ ಕೂಡ ಸಮಿತಿ ಪುನರ್‌ ರಚಿಸಿದ್ದರು. ಇದೀಗ ಫಡ್ನವೀಸ್​ ನೇತೃತ್ವದ ಹೊಸ ಸರ್ಕಾರವೂ ಸಮಿತಿಯನ್ನು ಪುನರ್‌ ರಚಿಸಿದೆ. 18 ಸದಸ್ಯರ ಸಮಿತಿಯಲ್ಲಿ ಸಿಎಂ ಜೊತೆಗೆ ಉಪ ಮುಖ್ಯಮಂತ್ರಿಗಳಾದ ಏಕನಾಥ್​ ಶಿಂಧೆ ಮತ್ತು ಅಜಿತ್​ ಪವರ್​ ಹಾಗೂ ಮಾಜಿ ಸಿಎಂ ನಾರಾಯಣ ರಾಣೆ, ಶರದ್​ ಪವರ್​, ಪೃಥ್ವಿರಾಜ್​ ಚೌಹಾಣ್​ ಇದ್ದಾರೆ. ಎನ್‌ಸಿಪಿ (ಎಸ್‌ಪಿ) ಶಾಸಕರಾದ ರೋಹಿತ್ ಪಾಟೀಲ್ ಮತ್ತು ಜಯಂತ್ ಪಾಟೀಲ್, ಸಚಿವರಾದ ಚಂದ್ರಕಾಂತ್ ಪಾಟೀಲ್, ಶಂಭುರಾಜ್ ದೇಸಾಯಿ, ಪ್ರಕಾಶ್ ಅಬಿತ್ಕರ್, ಸುರೇಶ್ ಖಾಡೆ, ಬಿಜೆಪಿ ಶಾಸಕರಾದ ಸುಧೀರ್ ಗಾಡ್ಗಿಲ್, ಸಚಿನ್ ಕಲ್ಯಾಣ್ ಶೆಟ್ಟಿ, ವಿಧಾನಸಭೆ ಮತ್ತು ಪರಿಷತ್ತಿನ ವಿರೋಧ ಪಕ್ಷದ ನಾಯಕರು ಸಮಿತಿಯ ಇತರ ಸದಸ್ಯರು.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಪ್ರಸ್ತುತ ವಿಪಕ್ಷ ನಾಯಕರಿಲ್ಲ. ವಿಪಕ್ಷ ಸ್ಥಾನ ಹೊಂದುವಷ್ಟು ಸ್ಥಾನ ಗಳಿಸದ ಹಿನ್ನೆಲೆಯಲ್ಲಿ ಶಿವಸೇನೆ (ಯುಬಿಟಿ) ಮತ್ತು ಕಾಂಗ್ರೆಸ್ ಶಾಸಕರು ಉನ್ನತಾಧಿಕಾರದ ಸಮಿತಿಯಲ್ಲಿ ಸ್ಥಾನ ಪಡೆದಿಲ್ಲ. ಭಾಷಾವಾರು ಆಧಾರದ ಮೇಲೆ ರಾಜ್ಯಗಳು ವಿಂಗಡನೆಯಾದ ಬಳಿಕ 1957ರಿಂದ ಈ ಗಡಿ ವಿವಾದವಿದೆ. ಹಿಂದಿನ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿದ್ದ ಬೆಳಗಾವಿಯನ್ನು ಮಹಾರಾಷ್ಟ್ರದ ಭಾಗವಾಗಿಸಬೇಕು, ಇಲ್ಲಿ ಗಣನೀಯ ಪ್ರಮಾಣದಲ್ಲಿ ಮರಾಠಿ ಮಾತನಾಡುವ ಜನರಿದ್ದಾರೆ ಎಂದು ಮಹಾ ಸರ್ಕಾರ ವಾದಿಸುತ್ತಿದೆ. ಸದ್ಯ 800ಕ್ಕೂ ಹೆಚ್ಚು ಮರಾಠಿ ಮಾತನಾಡುವ ಹಳ್ಳಿಗಳು ಕರ್ನಾಟಕದ ಭಾಗವಾಗಿದ್ದು, ಅದರ ಹಕ್ಕನ್ನು ಕರ್ನಾಟಕ ಪಡೆದಿದೆ. ರಾಜ್ಯಗಳ ಪುನರ್ವಿಂಗಡಣಾ ಕಾಯ್ದೆ ಮತ್ತು 1967ರ ಮಹಾಜನ್ ಆಯೋಗದ ವರದಿಯ ಪ್ರಕಾರ, ಭಾಷಾವಾರು ಆಧಾರದ ಮೇಲೆ ಮಾಡಿದ ಗಡಿ ಗುರುತಿಸುವಿಕೆಯೇ ಅಂತಿಮ ಎಂದು ಕರ್ನಾಟಕ ಪ್ರತಿಪಾದಿಸಿದೆ.

Category
ಕರಾವಳಿ ತರಂಗಿಣಿ