ನವದೆಹಲಿ: ಯುದ್ಧಪೀಡಿತ ಇರಾನ್‌ನಿಂದ ಅರ್ಮೇನಿಯಾಗೆ ಸ್ಥಳಾಂತರಿಸಲ್ಪಟ್ಟ 110 ವಿದ್ಯಾರ್ಥಿಗಳನ್ನು ಹೊತ್ತ ಮೊದಲ ವಿಮಾನ ತಡರಾತ್ರಿ ನವದೆಹಲಿಗೆ ಬಂದಿಳಿಯಿತು. ಈ ಸ್ಥಳಾಂತರ ಕಾರ್ಯಾಚರಣೆಗೆ ಭಾರತ 'ಆಪರೇಷನ್ ಸಿಂಧು' ಎಂದು ಹೆಸರಿಟ್ಟಿದೆ. ಇಸ್ರೇಲ್-ಇರಾನ್ ನಡುವಿನ ಸಂಘರ್ಷ ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವ ನಡುವೆ ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಮೊದಲು ನಗರದಿಂದ ಹೊರಗೆ ಸ್ಥಳಾಂತರಿಸಲಾಗಿತ್ತು. ಈ ಪೈಕಿ 110 ಮಂದಿ ಇರಾನ್ ಗಡಿ ದಾಟಿ ನೆರೆಯ ಅರ್ಮೇನಿಯಾ ದೇಶಕ್ಕೆ ತೆರಳಿದ್ದರು. ಈ ವಿದ್ಯಾರ್ಥಿಗಳನ್ನು ಇರಾನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ನೆರವಿನೊಂದಿಗೆ ಸ್ವದೇಶಕ್ಕೆ ಕರೆತರಲಾಗುತ್ತಿದೆ.
ವಿದ್ಯಾರ್ಥಿಗಳ ಸ್ಥಳಾಂತರಿಸುತ್ತಿರುವ ಕಾರ್ಯಕ್ಕೆ ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿ ಸಂಘವು ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಧನ್ಯವಾದ ತಿಳಿಸಿದೆ. ಉಳಿದ ವಿದ್ಯಾರ್ಥಿಗಳನ್ನೂ ಶೀಘ್ರದಲ್ಲೇ ಸ್ಥಳಾಂತರಿಸುವ ಭರವಸೆ ಇದೆ ಎಂದು ಸಂಘ ಹೇಳಿಕೆಯಲ್ಲಿ ತಿಳಿಸಿದೆ. ಇರಾನ್‌ನಿಂದ ಆಗಮಿಸಿದ ವಿದ್ಯಾರ್ಥಿಗಳ ಪೈಕಿ ಹಲವರು ದೆಹಲಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದಕ್ಕೆ ಪ್ರತಿಕ್ರಿಯೆ ನೀಡಿದರು. ಈ ಪೈಕಿ ಓರ್ವ ವಿದ್ಯಾರ್ಥಿ, "ನಮ್ಮ ದೇಶಕ್ಕೆ ಮರಳಿರುವುದು ತುಂಬಾ ಹರ್ಷ ತಂದಿದೆ. ಇರಾನ್ ನಲ್ಲಿ ನಾವಿದ್ದ ಉರ್ಮಿಯಾದಲ್ಲಿ ಪರಿಸ್ಥಿತಿ ಹದಗೆಟ್ಟಿರಲಿಲ್ಲ . ಆದರೆ ಇತರ ಸ್ಥಳಗಳಲ್ಲಿ ಪರಿಸ್ಥಿತಿ ತೀರಾ ಕೆಟ್ಟದಾಗಿತ್ತು. ಭಾರತ ಸರ್ಕಾರದ ಸಹಾಯದಿಂದಾಗಿ ನಾವು ಮನೆಗೆ ಮರಳಿದ್ದೇವೆ" ಎಂದರು.