ಕೆನಡಾ : ಭಾರತ ಮತ್ತು ಪಾಕಿಸ್ತಾನದ ನಡುವೆ ಅಮೆರಿಕ ಮಧ್ಯಸ್ಥಿಕೆ ನಡೆಸಿತು ಎಂದು ಹಲವು ಬಾರಿ ಹೇಳಿಕೆ ನೀಡಿದ್ದ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಧಾನಿ ಮೋದಿ ಸ್ಪಷ್ಟೀಕರಣ ನೀಡಿದ್ದಾರೆ. ಟ್ರಂಪ್ ಜೊತೆಗಿನ ಫೋನ್ ಸಂಭಾಷಣೆಯಲ್ಲಿ, ಪಾಕಿಸ್ತಾನದ ಮನವಿಯ ಮೇರೆಗೆ ಆಪರೇಷನ್ ಸಿಂಧೂರಕ್ಕೆ ವಿರಾಮ ಘೋಷಿಸಲಾಯಿತೇ ಹೊರತು ಅಮೆರಿಕದ ಮಧ್ಯಸ್ಥಿಕೆಯಿಂದಲ್ಲ ಎಂದು ಮೋದಿ ತಿಳಿಸಿದ್ದಾರೆ. ಮಂಗಳವಾರ ಟ್ರಂಪ್ ಅವರಿಗೆ ಕರೆ ಮಾಡಿ 35 ನಿಮಿಷಗಳ ಕಾಲ ಮಾತನಾಡಿದ ಅವರು, ಪಾಕಿಸ್ತಾನದಲ್ಲಿರುವ ಉಗ್ರರ ಅಡಗುತಾಣಗಳ ಮೇಲೆ ಭಾರತ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿತು. ಈ ಕಾರ್ಯಾಚರಣೆ ಭಯೋತ್ಪಾದನೆಯನ್ನು ಬೆಂಬಲಿಸುವ ದೇಶಗಳು ತಕ್ಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಮನವರಿಕೆ ಮಾಡಿದ್ದಾರೆ.
ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಬಳಿಕ ಇದೇ ಮೊದಲ ಬಾರಿಗೆ ಟ್ರಂಪ್ ಮತ್ತು ಮೋದಿ ಮಾತುಕತೆ ನಡೆಸಿದರು. ಭಾರತ ಯಾವುದೇ ಮೂರನೇ ವ್ಯಕ್ತಿ ಮಧ್ಯಸ್ಥಿಕೆಯನ್ನು ಸ್ವೀಕರಿಸುವುದಿಲ್ಲ. ಭವಿಷ್ಯದಲ್ಲೂ ಈ ರೀತಿಯ ಮಧ್ಯಸ್ಥಿಕೆಗೆ ಅವಕಾಶ ನೀಡುವುದಿಲ್ಲ ಎಂದು ಮೋದಿ ಸ್ಪಷ್ಟಪಡಿಸಿರುವುದಾಗಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ತಿ ಮಾಹಿತಿ ನೀಡಿದ್ದಾರೆ. ಈ ಸಂಭಾಷಣೆಯ ಸಂದರ್ಭದಲ್ಲಿ ಟ್ರಂಪ್, ಜಿ7 ಸಭೆಯ ಬಳಿಕ ಕೆನಡಾದಿಂದ ಮರಳುವಾಗ ಅಮೆರಿಕಕ್ಕೆ ಭೇಟಿ ನೀಡುವಂತೆ ಮೋದಿಗೆ ಆಹ್ವಾನ ನೀಡಿದ್ದರು. ಆದರೆ, ಪೂರ್ವನಿರ್ಧರಿತ ಕಾರ್ಯಕ್ರಮಗಳಿಂದಾಗಿ ಈ ಆಹ್ವಾನ ಸ್ವೀಕರಿಸಲಿಲ್ಲ. ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಕ್ವಾಡ್ ಶೃಂಗಸಭೆಯಲ್ಲಿ ಭಾಗಿಯಾಗುವಂತೆ ಟ್ರಂಪ್ ಅವರಿಗೆ ಮೋದಿ ಆಹ್ವಾನ ನೀಡಿದರು ಎಂದು ಅವರು ತಿಳಿಸಿದರು. ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ಉಗ್ರರ ದಾಳಿ ನಡೆದಾಗ ಟ್ರಂಪ್ ಕರೆ ಮಾಡಿ, ದಾಳಿಯಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ವ್ಯಕ್ತಪಡಿಸಿ, ಭಯೋತ್ಪಾದನೆಯ ವಿರುದ್ಧದ ಭಾರತದ ಹೋರಾಟವನ್ನು ಬೆಂಬಲಿಸುವುದಾಗಿ ತಿಳಿಸಿದ್ದರು.