ನವದೆಹಲಿ: ಕೇಂದ್ರ ಸರ್ಕಾರವು ಆಗಸ್ಟ್ 15 ರಿಂದ ಸುಗಮ ಹಾಗೂ ಸರಾಗವಾದ ಹೆದ್ದಾರಿ ಪ್ರಯಾಣಕ್ಕೆ 3,000 ರೂ ಮೌಲ್ಯದ ಫಾಸ್ಟ್‌ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಪರಿಚಯಿಸಲು ಸಿದ್ಧವಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬುಧವಾರ ತಿಳಿಸಿದ್ದಾರೆ. X ಹ್ಯಾಂಡಲ್ ಪೋಸ್ಟ್ ವೊಂದನ್ನು ಮಾಡಿರುವ ಅವರು, ಪಾಸ್ ಸಕ್ರಿಯಗೊಳಿಸಿದ ದಿನಾಂಕದಿಂದ ಒಂದು ವರ್ಷ ಅಥವಾ 200 ಟ್ರಿಪ್‌ಗಳವರೆಗೆ ಯಾವುದು ಮೊದಲು ಬರುತ್ತದೆಯೋ ಅದು ಮಾನ್ಯವಾಗಿರುವಂತೆ ಪಾಸ್ ರೂಪಿಸಲಾಗಿದೆ ಎಂದು ಗಡ್ಕರಿ ಅವರು ಹೇಳಿದ್ದಾರೆ. ಕಾರುಗಳು, ಜೀಪ್‌ಗಳು ಮತ್ತು ವ್ಯಾನ್‌ಗಳಂತಹ ವಾಣಿಜ್ಯೇತರ ಖಾಸಗಿ ವಾಹನಗಳಿಗೆ ಮಾತ್ರ ಈ ಪಾಸ್ ವಿನ್ಯಾಸಗೊಳಿಸಲಾಗಿದೆ ಎಂದು ಅವರು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ವಾರ್ಷಿಕ ಪಾಸ್ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮ ಮತ್ತುಸರಾಗ ಹಾಗೂ ಕಡಿಮೆ ವೆಚ್ಚದ ಪರಿಣಾಮಕಾರಿ ಪ್ರಯಾಣವನ್ನು ಸಕ್ರಿಯಗೊಳಿಸುತ್ತದೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ. ಸಕ್ರಿಯಗೊಳಿಸುವಿಕೆ ಮತ್ತು ನವೀಕರಣಕ್ಕಾಗಿ ಮೀಸಲಾದ ಲಿಂಕ್ ಶೀಘ್ರದಲ್ಲೇ ರಾಜ್‌ಮಾರ್ಗ್ ಯಾತ್ರಾ ಅಪ್ಲಿಕೇಶನ್‌ನಲ್ಲಿ ಹಾಗೂ NHAI ಮತ್ತು MoRTH ನ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಲಭ್ಯವಿರುತ್ತದೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. 60 ಕಿ.ಮೀ ವ್ಯಾಪ್ತಿಯೊಳಗೆ ಇರುವ ಟೋಲ್ ಪ್ಲಾಜಾಗಳಿಗೆ ಸಂಬಂಧಿಸಿದ ದೀರ್ಘಕಾಲದ ಕಳವಳಗಳನ್ನು ಈ ನೀತಿ ಪರಿಹರಿಸುತ್ತದೆ ಮತ್ತು ಒಂದೇ ಕೈಗೆಟುಕುವ ವಹಿವಾಟಿನ ಮೂಲಕ ಟೋಲ್ ಪಾವತಿಗಳನ್ನು ಸರಳಗೊಳಿಸುತ್ತದೆ ಎಂದು ಕೇಂದ್ರದ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವರು ಸ್ಪಷ್ಟಪಡಿಸಿದ್ದಾರೆ. "ಕಾಯುವ ಸಮಯ ಹಾಗೂ ದಟ್ಟಣೆಯನ್ನು ಕಡಿಮೆ ಮಾಡುವುದು ಮತ್ತು ಟೋಲ್ ಪ್ಲಾಜಾಗಳಲ್ಲಿ ವಿವಾದಗಳನ್ನು ಕಡಿಮೆ ಮಾಡುವ ಮೂಲಕ, ವಾರ್ಷಿಕ ಪಾಸ್ ಲಕ್ಷಾಂತರ ಖಾಸಗಿ ವಾಹನ ಮಾಲೀಕರಿಗೆ ವೇಗವಾದ ಮತ್ತು ಸುಗಮ ಪ್ರಯಾಣದ ಅನುಭವವನ್ನು ನೀಡುವ ಗುರಿಯನ್ನು ಹೊಂದಿದೆ ಎಂದು ಸಚಿವರು ಹೇಳಿದ್ದಾರೆ.