ನವದೆಹಲಿ: ನಟ ಕಮಲ್ ಹಾಸನ್ ಅವರ "ಥಗ್ ಲೈಫ್" ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆ ಮಾಡದಿರುವ ಬಗ್ಗೆ ಕರ್ನಾಟಕ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು ಮತ್ತು ಜನರು ಚಿತ್ರವನ್ನು ನೋಡದಂತೆ ತಡೆಯಲು ಅವರ ತಲೆಯ ಮೇಲೆ ಬಂದೂಕುಗಳನ್ನು ಇಡಬಾರದು. ಗುಂಪು ಮತ್ತು ಕಿಡಗೇಡಿಗಳು ರಸ್ತೆಗಿಳಿಯಲು ಬಿಡಬಾರದು ಎಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಮನಮೋಹನ್ ಅವರ ಪೀಠ ತಿಳಿಸಿದೆ.
ಇದೇ ವೇಳೆ, ರಾಜ್ಯದಲ್ಲಿ ಚಿತ್ರ ಬಿಡುಗಡೆಯ ಬಗ್ಗೆ ತಿಳಿಸಲು ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಪೀಠ ಒಂದು ದಿನದ ಕಾಲಾವಕಾಶ ನೀಡಿದೆ. 'ಒಂದು ಚಿತ್ರವು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಅನುಮತಿ ಪಡೆದ ನಂತರ, ಆ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಬೇಕು' ಎಂದು ಪೀಠ ತಿಳಿಸಿದೆ. ಕಮಲ್ ಹಾಸನ್ ಏನಾದರೂ ಅನಾನುಕೂಲಕರವಾದದ್ದನ್ನು ಹೇಳಿದ್ದರೆ ಅದನ್ನು ಸತ್ಯ ಎಂದು ಪರಿಗಣಿಸಲಾಗುವುದಿಲ್ಲ ಮತ್ತು ಕರ್ನಾಟಕದ ಪ್ರಬುದ್ಧ ಜನರು ಚರ್ಚಿಸಿ , ಅದು ತಪ್ಪು ಎಂದು ಹೇಳಬೇಕಾಗಿತ್ತು ಎಂದು ಪೀಠ ಅಭಿಪ್ರಾಯಪಟ್ಟಿದೆ. ಕನ್ನಡ ಭಾಷೆಯ ಕುರಿತು ಹೇಳಿಕೆಗೆ ಕ್ಷಮೆಯಾಚಿಸುವಂತೆ ಕಮಲ್ ಹಾಸನ್ಗೆ ಸೂಚಿಸಿದ ಹೈಕೋರ್ಟ್ ಕ್ರಮವನ್ನು ಸುಪ್ರೀಂಕೋರ್ಟ್ ಟೀಕಿಸಿದ್ದು, ಕ್ಷಮೆಯಾಚಿಸುವ ಅಗತ್ಯವಿಲ್ಲ ಎಂದು ಹೇಳಿದೆ.
ಕರ್ನಾಟಕ ಹೊರತುಪಡಿಸಿ "ಥಗ್ ಲೈಫ್" ಜೂನ್ 5 ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಹಿರಿಯ ನಿರ್ದೇಶಕ ಮಣಿರತ್ನಂ ಮತ್ತು ನಟ ಕಮಲ್ ಹಾಸನ್ ಕಾಂಬಿನೇಷನ್ನಲ್ಲಿ 'ಥಗ್ ಲೈಫ್' ಚಿತ್ರ ನಿರ್ಮಾಣವಾಗಿತ್ತು. ಇನ್ನು 'ಥಗ್ ಲೈಫ್' ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕಮಲ್ ಹಾಸನ್ "ಕನ್ನಡ ತಮಿಳಿನಿಂದ ಹುಟ್ಟಿದೆ" ಎಂದು ಹೇಳಿಕೆ ಕೊಟ್ಟ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕಮಲ್ ಸಿನಿಮಾ ಬ್ಯಾನ್ಗೆ ಒತ್ತಾಯಗಳು ಕೇಳಿ ಬಂದಿದ್ದವು. ಇದರಿಂದಾಗಿ ರಾಜ್ಯದಲ್ಲಿ ಸಿನಿಮಾ ಬಿಡುಗಡೆಯಾಗಿರಲಿಲ್ಲ.
ಈ ಸಂಬಂಧ ಪ್ರಕರಣ ಹೈಕೋರ್ಟ್ಗೆ ಮೆಟ್ಟಿಲೇರಿತ್ತು. ಆಗ ಹೈಕೋರ್ಟ್ ಕ್ಷಮೆಯಾಚಿಸುವಂತೆ ಕಮಲ್ ಹಾಸನ್ಗೆ ಸೂಚಿಸಿತ್ತು. ಕರ್ನಾಟಕದಲ್ಲಿ ಚಲನಚಿತ್ರ ಬಿಡುಗಡೆಯಾಗದಿರುವುದನ್ನು ಪ್ರಶ್ನಿಸಿ ಎಂ. ಮಹೇಶ್ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದ್ದು, ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ. ಬೆಂಗಳೂರಿನ ಎಂ.ಮಹೇಶ್ ರೆಡ್ಡಿ ಸಲ್ಲಿಸಿದ್ದ ರಿಟ್ ಅರ್ಜಿಯಲ್ಲಿ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್ಸಿ) ಪ್ರಮಾಣ ಪತ್ರ ನೀಡಿದ್ದರೂ, ಕರ್ನಾಟಕ ಸರ್ಕಾರವು ಮೌಖಿಕ ಸೂಚನೆಗಳು ಮತ್ತು ಪೊಲೀಸ್ ಹಸ್ತಕ್ಷೇಪದ ಮೂಲಕ 'ಥಗ್ ಲೈಫ್' ಚಿತ್ರ ಬಿಡುಗಡೆಯನ್ನು ತಡೆದಿದೆ ಎಂದು ದೂರಿದ್ದರು.