ನವದೆಹಲಿ: ಭಾರತ ಸರ್ಕಾರದಲ್ಲಿ ವಿವಿಧ ಪ್ರಮುಖ ಹುದ್ದೆಗಳನ್ನು ನಿಭಾಯಿಸಿರುವ ಜಿ20 ಶೆರ್ಪಾ ಅಮಿತಾಬ್ ಕಾಂತ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಸುಮಾರು 45 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿರುವ ಕಾಂತ್, ಭಾರತದ ನೀತಿ ಆಯೋಗದ ಮಾಜಿ ಸಿಇಒ ಕೂಡ ಆಗಿದ್ದರು. 1980ರ ಬ್ಯಾಚ್ನ ಕೇರಳ ಕೇಡರ್ನ ಐಎಎಸ್ ಅಧಿಕಾರಿಯಾಗಿರುವ ಇವರನ್ನು 2022ರ ಜುಲೈನಲ್ಲಿ ಭಾರತದ ಜಿ20ಯ ಶೆರ್ಪಾ ಆಗಿ ನೇಮಿಸಲಾಗಿತ್ತು. ತಮ್ಮ ಸಾರ್ವಜನಿಕ ಸೇವಾ ಹುದ್ದೆಗೆ ರಾಜೀನಾಮೆ ನೀಡಿರುವ ಕುರಿತು ಲಿಂಕ್ಡಿನ್ ಪ್ರೊಫೈಲ್ನಲ್ಲಿ ಪೋಸ್ಟ್ ಮಾಡಿರುವ ಕಾಂತ್, ನನ್ನ ಹೊಸ ಪ್ರಯಾಣ ಆರಂಭ ಎಂಬ ಶೀರ್ಷಿಕೆ ನೀಡಿ, ರಾಜೀನಾಮೆ ಕುರಿತು ಬರೆದುಕೊಂಡಿದ್ದಾರೆ.
"45 ವರ್ಷಗಳ ಕಾಲ ಸರ್ಕಾರಕ್ಕೆ ಸೇವೆ ಸಲ್ಲಿಸಿದ ಬಳಿಕ ನಾನು ಇದೀಗ ಹೊಸ ಅವಕಾಶವನ್ನು ಅಪ್ಪಿಕೊಳ್ಳಲು ಹಾಗೂ ಜೀವನದಲ್ಲಿ ಮುಂದೆ ಸಾಗುವ ನಿರ್ಧಾರ ನಡೆಸಿದ್ದೇನೆ. ಜಿ-20 ಶೆರ್ಪಾ ಹುದ್ದೆಗೆ ನನ್ನ ರಾಜೀನಾಮೆ ಸ್ವೀಕರಿಸಿದ ಭಾರತದ ಪ್ರಧಾನಿಗೆ ಹೃತ್ಪೂರ್ವಕ ಧನ್ಯವಾದ ತಿಳಿಸುತ್ತೇನೆ. ಜಿ-20 ಶೆರ್ಪಾ ನನಗೆ ಹಲವಾರು ಅಭಿವೃದ್ಧಿ ಉಪಕ್ರಮಗಳನ್ನು ಮುನ್ನಡೆಸಲು ಹಾಗೂ ಭಾರತದ ಬೆಳವಣಿಗೆ, ಅಭಿವೃದ್ಧಿ ಮತ್ತು ಪ್ರಗತಿಗೆ ಕೊಡುಗೆ ನೀಡಲು ಅವಕಾಶ ನೀಡಿತು. ಆಫ್ರಿಕನ್ ಒಕ್ಕೂಟವನ್ನು G-20ಯ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ವಿಸ್ತರಿಸಿದ್ದೇವೆ. ಜಾಗತಿಕ ಒಳಗೊಳ್ಳುವಿಕೆ ಮತ್ತು ಜಾಗತಿಕ ದಕ್ಷಿಣದೊಂದಿಗೆ ಸಹಯೋಗಕ್ಕೆ ಭಾರತದ ಭರವಸೆ ಮತ್ತು ಬದ್ಧತೆಯನ್ನು ಪೂರೈಸಿದ್ದೇವೆ" ಎಂದು ಕಾಂತ್ ತಿಳಿಸಿದ್ದಾರೆ.
"2016-2022 ರವರೆಗೆ ನೀತಿ ಆಯೋಗದ ಸಿಇಒ ಆಗಿದ್ದಾಗ ಸಾಮಾಜಿಕ ಆರ್ಥಿಕ ನೀತಿಗಳನ್ನು ಸುಧಾರಿಸುವ ಮೂಲಕ ಲಕ್ಷಾಂತರ ನಾಗರಿಕರಿಗೆ ಅವಕಾಶಗಳನ್ನು ಸೃಷ್ಟಿಸಲಾಗಿದೆ. ದೇಶದ 115 ಅತ್ಯಂತ ಹಿಂದುಳಿದ ಜಿಲ್ಲೆಗಳನ್ನು ಉನ್ನತೀಕರಿಸಲಾಗಿದೆ. ನನ್ನ ಸಂಪೂರ್ಣ ವೃತ್ತಿಜೀವನ ಬಲವಾದ ಸೇವಾಪ್ರಜ್ಞೆಯಿಂದ ಮಾರ್ಗದರ್ಶಿತವಾಗಿದೆ. ಐಎಎಸ್ ವೃತ್ತಿ ಜೀವನದಲ್ಲಿ ಕೇರಳ ನನ್ನ ಮೊದಲ ಮನೆಯಾಗಿದ್ದು, ಕ್ಯಾಲಿಕಟ್ ವಿಮಾನ ನಿಲ್ದಾಣದ ವಿಸ್ತರಣೆಗೆ ಬೆಂಬಲ, ಕೇರಳದ ಮೀನುಗಾರರು ಮತ್ತು ಮಹಿಳೆಯರ ಅಭಿವೃದ್ಧಿಗೆ ನಿಕಟವಾಗಿ ಕೆಲಸ ಮಾಡುವ ಮೂಲಕ ಸಮುದಾಯಗಳ ಏಳಿಗೆಗೆ ಆಳವಾಗಿ ಕೆಲಸ ಮಾಡಿದ್ದೇನೆ" ಎಂದು ಕಾಂತ್ ಬರೆದುಕೊಂಡಿದ್ದಾರೆ.