ಟೆಹ್ರಾನ್: ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿದೆ. ಉಭಯ ರಾಷ್ಟ್ರಗಳ ನಡುವೆ ಭಾರೀ ದಾಳಿಗಳು ನಡೆಯುತ್ತಿವೆ. ಇಸ್ರೇಲ್ ಪಡೆಗಳು ಇರಾನ್ ತೈಲ ಸಂಸ್ಕರಣಾ ಘಟಕದ ಮೇಲೆ ಬಾಂಬ್ ದಾಳಿ ಮಾಡಿ ತೀವ್ರ ಹಾನಿ ಉಂಟು ಮಾಡಿವೆ. ಜೊತೆಗೆ, ಗುಪ್ತಚರ ದಳದ ಮುಖ್ಯಸ್ಥರನ್ನೂ ಹೊಡೆದು ಹಾಕಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಇಸ್ರೇಲ್ ಮೇಲೆ ಹಗಲು-ರಾತ್ರಿ ಕ್ಷಿಪಣಿಗಳ ಸುರಿಮಳೆ ಸುರಿಸುತ್ತಿದೆ. ಇದು ಅಪಾರ ಹಾನಿಯನ್ನುಂಟು ಮಾಡಿದೆ. ಎರಡೂ ರಾಷ್ಟ್ರಗಳ ಮಧ್ಯೆ ಕಳೆದ ನಾಲ್ಕು ದಿನಗಳಿಂದ 'ಏಟಿಗೆ ಎದಿರೇಟು' ಎಂಬಂತೆ ದಾಳಿಗಳು ನಡೆಯುತ್ತಿವೆ.
ಇಸ್ರೇಲ್ ಮೇಲೆ ಇರಾನ್ ಇಂದು ಕ್ಷಿಪಣಿ ದಾಳಿಗಳನ್ನು ನಡೆಸಿತು. ಇಸ್ರೇಲ್ ರಕ್ಷಣಾ ವ್ಯವಸ್ಥೆಯಾದ ಐರನ್ಡೋಮ್ ಅನ್ನು ಭೇದಿಸಿಕೊಂಡು ಬಂದ ಕ್ಷಿಪಣಿಗಳು ಟೆಲ್ ಅವೀವ್ನ ಹಲವು ಪ್ರದೇಶಗಳಲ್ಲಿ ಅಪ್ಪಳಿಸಿವೆ. ಇದರಿಂದ ಸಾವು-ನೋವುಗಳೂ ಹೆಚ್ಚಿವೆ. ಇದರಿಂದ ವಿಸ್ತೃತ ಮತ್ತು ಅಪಾಯಕಾರಿ ಯುದ್ಧಕ್ಕೆ ಎಡೆ ಮಾಡಿಕೊಟ್ಟಿದೆ. ಇಸ್ರೇಲ್ ಕೂಡ ತನ್ನ ದಾಳಿಯನ್ನು ಮತ್ತಷ್ಟು ಬಲಪಡಿಸಿದ್ದು, ಇರಾನ್ನ ತೈಲ ಸಂಸ್ಕರಣಾ ಘಟಕವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ. ಇದರಿಂದ ತೈಲೋತ್ಪನ್ನ ಮತ್ತು ಸಾಗಣೆ ಮೇಲೆ ಭಾರೀ ಪರಿಣಾಮ ಬೀರಲಿದೆ. ಇರಾನ್ ವಿಶ್ವದ ಬೇಡಿಕೆಯಲ್ಲಿ ಶೇಕಡಾ 6.5ರಷ್ಟು ತೈಲವನ್ನು ಉತ್ಪಾದಿಸುತ್ತದೆ. ತೈಲಾಗಾರಕ್ಕೆ ಹಾನಿ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ತೀವ್ರ ಬಿಕ್ಕಟ್ಟು ಸೃಷ್ಟಿಸುವ ಸಾಧ್ಯತೆ ಇದೆ.
ಇಸ್ರೇಲ್ ದಾಳಿಗೆ ಅಮೆರಿಕ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿರುವ ಇರಾನ್ ತನ್ನ ದಾಳಿಯನ್ನು ಅಮೆರಿಕ ಕಾನ್ಸುಲೇಟ್ ಮೇಲೆ ಗುರಿ ಮಾಡಿದೆ. ಇದರಿಂದ ಸೋಮವಾರದ ದಾಳಿಯಲ್ಲಿ ಕ್ಷಿಪಣಿಯೊಂದು ಟೆಲ್ ಅವಿವ್ನಲ್ಲಿರುವ ಅಮೆರಿಕದ ಕಾನ್ಸುಲೇಟ್ ಕಚೇರಿಗೆ ಬಡಿದಿದೆ. ಇದರಿಂದ ಕಟ್ಟಡಕ್ಕೆ ಸಣ್ಣಪುಟ್ಟ ಹಾನಿಯಾಗಿದೆ ಎಂದು ಅಮೆರಿಕದ ರಾಯಭಾರಿ ಮೈಕ್ ಹಕಬಿ ತಿಳಿಸಿದ್ದಾರೆ.