image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಡಿಎನ್​ಎ ಪರೀಕ್ಷೆ ಬಳಿಕ ಶವಗಳ ಸಾಗಾಟಕ್ಕೆ 200 ಆಂಬ್ಯುಲೆನ್ಸ್

ಡಿಎನ್​ಎ ಪರೀಕ್ಷೆ ಬಳಿಕ ಶವಗಳ ಸಾಗಾಟಕ್ಕೆ 200 ಆಂಬ್ಯುಲೆನ್ಸ್

ಗುಜರಾತ್​ : ಅಹಮದಾಬಾದ್​ ವಿಮಾನ ದುರಂತದಲ್ಲಿ ಮೃತಪಟ್ಟವರನ್ನು ಗುರುತಿಸಿಲು ಡಿಎನ್​ಎ ಪರೀಕ್ಷೆ ನಡೆಸಲಾಗುತ್ತಿದೆ. ಅದಕ್ಕಾಗಿ ಸಂಬಂಧಿಕರ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ. ಬಿಜಿ ವೈದ್ಯಕೀಯ ಕಾಲೇಜಿನಲ್ಲಿ ಈ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಎಲ್ಲರ ರಕ್ತದ ಮಾದರಿಯನ್ನು ಪಡೆದುಕೊಂಡಿದ್ದು, ಅದನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಡಿಎನ್​ಎ ಮಾದರಿ ಹೊಂದಿಕೆಯಾದ ಬಳಿಕ ಆಯಾ ಕುಟುಂಬಗಳಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿಎನ್​ಎ ಮಾದರಿ ಹೊಂದಿಕೆಯಾದ ಬಳಿಕ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು. ಸಾಗಿಸಲು ಆಸ್ಪತ್ರೆಯ ಮುಂಭಾಗ 200 ಆಂಬ್ಯುಲೆನ್ಸ್​ಗಳನ್ನು ಸನ್ನದ್ಧವಾಗಿ ಇಡಲಾಗಿದೆ. ಡಿಎನ್​ಎ ಪರೀಕ್ಷೆಯು ಪೂರ್ಣಗೊಂಡ ತಕ್ಷಣವೇ ಎಲ್ಲ ಮೃತರ ಶವಗಳನ್ನು ಅವರ ಮನೆಗಳಿಗೆ ಕಳುಹಿಸಲಾಗುತ್ತದೆ. ಶವಗಳನ್ನು ಕಳುಹಿಸಲು ಆಂಬ್ಯುಲೆನ್ಸ್‌ಗಳಲ್ಲಿ ವಿಶೇಷವಾಗಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರಲ್ಲಿ, ಚಾಲಕನ ಜೊತೆಗೆ ಇನ್ನಿಬ್ಬರು ಇರಲಿದ್ದಾರೆ. ಇಡೀ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ಸಿವಿಲ್ ಆಸ್ಪತ್ರೆಯ ಹಿರಿಯ ಅಧಿಕಾರಿಗಳಿಗೆ ವಹಿಸಲಾಗಿದೆ. ಅವರ ನೇತೃತ್ವದಲ್ಲಿ ವಿವಿಧ ತಂಡಗಳನ್ನು ರಚಿಸಲಾಗಿದ್ದು, ಅವುಗಳಿಗೆ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ.

ಸಂಗ್ರಹಿಸಲಾಗಿರುವ ಮೃತರ ಸಂಬಂಧಿಕರ ರಕ್ತದ ಮಾದರಿಯ ಪರೀಕ್ಷೆ ನಡೆಸಲು ಸುಮಾರು 72 ಗಂಟೆಗಳು ಬೇಕಾಗುತ್ತದೆ ಎಂದು ಜಿಲ್ಲಾಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಕೆಲಸ ಪೂರ್ಣಗೊಂಡ ತಕ್ಷಣ, ಶವಗಳನ್ನು ಮೃತರ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು. ಇದೀಗ ಎಲ್ಲಾ ಕುಟುಂಬ ಸದಸ್ಯರು ವರದಿಗಾಗಿ ಕಾಯುತ್ತಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿದ್ದಾರೆ. ಇನ್ನು ಕೆಲವರು ಹೋಟೆಲ್‌ನಲ್ಲಿ ಉಳಿದುಕೊಂಡು ಕಾಯುತ್ತಿದ್ದಾರೆ.

200ಕ್ಕೂ ಅಧಿಕ ಶವಗಳನ್ನು ಸಾಗಿಸಬೇಕಾದ ಕಾರಣ, ಸರ್ಕಾರ ಮಾತ್ರವಲ್ಲದೇ ವಿವಿಧ ಸಂಸ್ಥೆಗಳು ಕೂಡ ಸಹಾಯಕ್ಕೆ ಧಾವಿಸಿವೆ. ಆಂಬ್ಯುಲೆನ್ಸ್​ ಸೇವೆಯನ್ನು ನಿರ್ವಹಣೆ ಮಾಡುವ ಪುಷ್ಕರ್​ ಸಂಸ್ಥೆಯು ವಿವಿಧೆಡೆಯಿಂದ ಆಂಬ್ಯುಲೆನ್ಸ್​ಗಳನ್ನು ತಂದು ಆಸ್ಪತ್ರೆಯ ಮುಂದೆ ಜಮಾಯಿಸಿದೆ. ಎಲ್ಲಾ ಸಿಬ್ಬಂದಿಗೆ ವಿಶೇಷ ಸೂಚನೆಗಳನ್ನು ನೀಡಲಾಗಿದೆ. ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ, ಮೃತರ ಶವಗಳನ್ನು ಅವರ ಮನೆಗಳಿಗೆ ರವಾನಿಸಲಾಗುತ್ತದೆ. ಜೂನ್​ 12ರಂದು ಸಂಭವಿಸಿದ್ದ ಏರ್​ ಇಂಡಿಯಾ ವಿಮಾನ ಅಹಮದಾಬಾದ್​ನ ಸರ್ದಾರ್​ ವಲ್ಲಭಭಾಯ್ ಪಟೇಲ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1:30ಕ್ಕೆ ಹೊರಟಿತ್ತು. ಬಳಿಕ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಗಿ, ಮೆಡಿಕಲ್​ ಕಾಲೇಜಿನ ಹಾಸ್ಟೆಲ್​ ಮೇಲೆ ಬಿದ್ದಿತ್ತು. ಈ ದುರ್ಘಟನೆಯಲ್ಲಿ ಒಟ್ಟು 274 ಜನರು ಸಾವನ್ನಪ್ಪಿದ್ದಾರೆ.

Category
ಕರಾವಳಿ ತರಂಗಿಣಿ