image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿಮಾನ ಅಪಘಾತದ ಕಾರಣ ಕಂಡುಹಿಡಿಯಲು ಕೇಂದ್ರ ಗೃಹ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಬಹು ಶಿಸ್ತಿನ ಸಮಿತಿ ರಚನೆ

ವಿಮಾನ ಅಪಘಾತದ ಕಾರಣ ಕಂಡುಹಿಡಿಯಲು ಕೇಂದ್ರ ಗೃಹ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಬಹು ಶಿಸ್ತಿನ ಸಮಿತಿ ರಚನೆ

ನವದೆಹಲಿ: ಅಹಮದಾಬಾದ್​ ಏರ್​ ಇಂಡಿಯಾ ವಿಮಾನ ಅಪಘಾತಕ್ಕೆ ಕಾರಣ ಪರಿಶೀಲನೆಗಾಗಿ ಹಾಗೂ ಭವಿಷ್ಯದಲ್ಲಿ ಇಂತಹ ಅನಾಹುತವನ್ನು ತಡೆಗೆ ಮಾರ್ಗಸೂಚಿ ರೂಪಿಸಲು ಕೇಂದ್ರ ಗೃಹ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಬಹು ಶಿಸ್ತಿನ ಸಮಿತಿ ರಚಿಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ನಾಗರಿಕ ವಿಮಾನಯಾನ ಸಚಿವಾಲಯ, ಈ ಸಮಿತಿಯು ಇತರೆ ಸಂಬಂಧಿತ ಸಂಸ್ಥೆಗಳು ನಡೆಸುವ ತನಿಖೆಗಳಿಗೆ ಪರ್ಯಾಯವಲ್ಲ ಎಂದು ಸ್ಪಷ್ಟಪಡಿಸಿದೆ. ಈ ಸಮಿತಿ ಕೇವಲ ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಮತ್ತು ನಿರ್ವಹಿಸಲು ಎಸ್​ಒಪಿ ರೂಪಿಸುವತ್ತ ಮಾತ್ರ ಗಮನಹರಿಸಲಿದೆ. ಮೂರು ತಿಂಗಳಲ್ಲಿ ವರದಿ ನೀಡಲಿದೆ ಎಂದು ಸಚಿವಾಲಯ ತಿಳಿಸಿದೆ.

ಜೂನ್​ 12ರಂದು ಅಹಮದಾಬಾದ್​ನಿಂದ ಲಂಡನ್​ಗೆ ತೆರಳುತ್ತಿದ್ದ ಬೋಯಿಂಗ್ 787-8 ವಿಮಾನವು ಟೇಕ್​ಆಫ್​ ಆದ ಕೆಲವೇ ಕ್ಷಣದಲ್ಲಿ ಅಪಘಾತಕ್ಕೀಡಾಗಿ ಅದರಲ್ಲಿದ್ದ 241 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ, ವಿಮಾನವು ವೈದ್ಯಕೀಯ ಕಾಲೇಜು ಹಾಸ್ಟೆಲ್​ ಕಟ್ಟಡಕ್ಕೆ ಅಪ್ಪಳಿಸಿದ ಪರಿಣಾಮ ಒಟ್ಟಾರೆ 265ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅವಘಡದ ಬಗ್ಗೆ ಈಗಾಗಲೇ ವಿಮಾನ ಅಪಘಾತ ತನಿಖಾ ಬ್ಯೂರೋ ತನಿಖೆ ನಡೆಸುತ್ತಿದೆ. ಉನ್ನತ ಮಟ್ಟದ ಬಹು ಶಿಸ್ತಿನ ಸಮಿತಿಯು ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ ಮೋಹನ್ ಅಧ್ಯಕ್ಷತೆಯಲ್ಲಿ ಕಾರ್ಯ ನಿರ್ವಹಿಸಲಿದ್ದು, ನಾಗರಿಕ ವಿಮಾನಯಾನ ಕಾರ್ಯದರ್ಶಿ ಮತ್ತು ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಗಳು ಸದಸ್ಯರಾಗಿದ್ದಾರೆ.

ಗುಜರಾತ್ ಗೃಹ ಇಲಾಖೆ, ಗುಜರಾತ್ ವಿಪತ್ತು ಪ್ರತಿಕ್ರಿಯೆ ಪ್ರಾಧಿಕಾರ, ಅಹಮದಾಬಾದ್ ಪೊಲೀಸ್ ಆಯುಕ್ತರು, ಭಾರತೀಯ ವಾಯುಪಡೆಯ ತಪಾಸಣೆ ಮತ್ತು ಸುರಕ್ಷತೆಯ ಮಹಾನಿರ್ದೇಶಕರು, ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ ಮಹಾನಿರ್ದೇಶಕರು ಸಮಿತಿಯ ಭಾಗವಾಗಿದ್ದಾರೆ. ಅಲ್ಲದೆ, ಗುಪ್ತಚರ ಬ್ಯೂರೋದ ವಿಶೇಷ ನಿರ್ದೇಶಕರು ಮತ್ತು ವಿಧಿವಿಜ್ಞಾನ ವಿಜ್ಞಾನ ಸೇವೆಗಳ ನಿರ್ದೇಶನಾಲಯದ ನಿರ್ದೇಶಕರು ಸಮಿತಿಯಲ್ಲಿ ಇರಲಿದ್ದಾರೆ. ಆದೇಶದ ಪ್ರಕಾರ, ವಾಯುಯಾನ ತಜ್ಞರು, ಅಪಘಾತ ತನಿಖಾಧಿಕಾರಿಗಳು ಮತ್ತು ಕಾನೂನು ಸಲಹೆಗಾರರು ಸೇರಿದಂತೆ ಯಾವುದೇ ಇತರ ಸದಸ್ಯರನ್ನು ಸಮಿತಿಯಲ್ಲಿ ಸೇರಿಸಿಕೊಳ್ಳಬಹುದಾಗಿದೆ. ರಕ್ಷಣಾ ಕಾರ್ಯಾಚರಣೆಗಳು ಮತ್ತು ಸಮನ್ವಯ ಸೇರಿದಂತೆ ವಿವಿಧ ಪಾಲುದಾರರ ತುರ್ತು ಪ್ರತಿಕ್ರಿಯೆಯನ್ನು ಸಮಿತಿಯು ಪರಿಗಣಿಸಲಿದೆ.

Category
ಕರಾವಳಿ ತರಂಗಿಣಿ