ಟೆಲ್ ಅವಿವ್: ಇರಾನ್ನ ಪರಮಾಣು ತಾಣಗಳು ಮತ್ತು ಮಿಲಿಟರಿ ನಾಯಕರ ಮೇಲೆ ಇಸ್ರೇಲ್ ಕೈಗೊಂಡ ಆಪರೇಷನ್ ರೈಸಿಂಗ್ ಲಯನ್ಗೆ ಪ್ರತೀಕಾರವಾಗಿ ಇರಾನ್ ಸರಣಿ ಕ್ಷಿಪಣಿ ದಾಳಿ ನಡೆಸಿದೆ. ಶನಿವಾರ ಮುಂಜಾನೆ ನಡೆದ ದಾಳಿಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿ, ಹಲವುರು ಗಾಯಗೊಂಡಿದ್ದಾರೆ. ಇಸ್ರೇಲ್‌ನಾದ್ಯಂತ ಶುಕ್ರವಾರ ವಾಯುದಾಳಿಯ ಸೈರನ್‌ಗಳು ಮೊಳಗಿವೆ. ಇರಾನ್ ಸುಮಾರು 150 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ.
ಇರಾನ್ ಡ್ರೋನ್ ಹಾಗೂ ಸರಣಿ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸುವ ಮೂಲಕ ಇಸ್ರೇಲ್ ಮೇಲೆ ಪ್ರತೀಕಾರ ತೀರಿಸಿಕೊಂಡಿದೆ. ಜೆರುಸಲೆಮ್ ಮತ್ತು ಟೆಲ್ ಅವೀವ್ ನಗರಗಳಲ್ಲಿ ರಾತ್ರಿಯಿಡೀ ಸ್ಫೋಟಗಳು ಕೇಳಿಬಂದಿವೆ. ಅನೇಕ ಕಟ್ಟಡಗಳು ಅಲುಗಾಡಿವೆ. ಈಗಾಗಲೇ ಗಾಜಾ ಪಟ್ಟಿಯಲ್ಲಿ ಇಸ್ರೇಲ್-ಹಮಾಸ್ ಯುದ್ಧದಿಂದ ತತ್ತರಿಸಿರುವ ನಾಗರಿಕರು ಮತ್ತೆ ಗಂಟೆಗಳ ಕಾಲ ಬಾಂಬ್ ಆಶ್ರಯ ತಾಣಗಳ ಮೊರೆ ಹೋಗುವಂತಾಗಿದೆ.
ಕ್ಷಿಪಣಿ ದಾಳಿಯ ಹಿನ್ನೆಲೆಯಲ್ಲಿ ಟೆಲ್ ಅವಿವ್‌ನಲ್ಲಿ ದಟ್ಟ ಹೊಗೆ ಆವರಿಸಿರುವುದನ್ನು ಇಸ್ರೇಲಿ ಮಾಧ್ಯಮಗಳು ಪ್ರಸಾರ ಮಾಡಿವೆ. ಒಂಬತ್ತು ಕಡೆಗಳಲ್ಲಿ ತೀವ್ರ ನಷ್ಟ ಉಂಟಾಗಿದ್ದು, ಸುಮಾರು 15 ಜನರು ಗಾಯಗೊಂಡಿದ್ದಾರೆ. ಹೆಚ್ಚಿನವರು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ. ಇಸ್ರೇಲ್ ಸೇನೆಯು ದೇಶಾದ್ಯಂತ ಜನರು ಬಾಂಬ್ ರಕ್ಷಣಾ ತಾಣಗಳಿಗೆ ಸ್ಥಳಾಂತರಗೊಳ್ಳುವಂತೆ ಆದೇಶಿಸಿದೆ.
ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರತಿಬಂಧಿಸುವಲ್ಲಿ ಇಸ್ರೇಲ್‌ಗೆ ಯುಎಸ್ ನೆರವಾಗಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಇಸ್ರೇಲ್‌ನಲ್ಲಿ ಲಕ್ಷಾಂತರ ಅಮೆರಿಕನ್ನರು ವಾಸಿಸುತ್ತಿದ್ದಾರೆ. ಅವರ ಸರ್ಕಾರ ರಕ್ಷಿಸುವ ಕೆಲಸವನ್ನು ಯುಎಸ್ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ. ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಪ್ರತಿಕ್ರಿಯಿಸಿ, ಇಸ್ರೇಲ್‌ನ ನಾಗರಿಕ ವಾಸಸ್ಥಳಗಳ ಮೇಲೆ ಇರಾನ್ ಕ್ಷಿಪಣಿಗಳನ್ನು ಹಾರಿಸುವ ಮೂಲಕ ರೆಡ್ ಲೈನ್ ಕ್ರಾಸ್ ಮಾಡಿದೆ. ನಾವು ಇಸ್ರೇಲ್ ನಾಗರಿಕರ ರಕ್ಷಣೆ ಮಾಡುತ್ತೇವೆ. ಅಯತೊಲ್ಲಾ ಆಡಳಿತವು ತನ್ನ ಘೋರ ಕೃತ್ಯಕ್ಕೆ ಭಾರೀ ಬೆಲೆ ತೆರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.