image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಪಘಾತ ನನ್ನ ಕಣ್ಣೆದುರೇ ನಡೆಯಿತು. ನಾನು ಹೇಗೆ ಜೀವಂತವಾಗಿ ಹೊರಬಂದೆ ಗೊತ್ತಿಲ್ಲ : ವಿಮಾನ ಆಫಘಾತದಲ್ಲಿ ಬದುಕಿದ ರಮೇಶ್

ಅಪಘಾತ ನನ್ನ ಕಣ್ಣೆದುರೇ ನಡೆಯಿತು. ನಾನು ಹೇಗೆ ಜೀವಂತವಾಗಿ ಹೊರಬಂದೆ ಗೊತ್ತಿಲ್ಲ : ವಿಮಾನ ಆಫಘಾತದಲ್ಲಿ ಬದುಕಿದ ರಮೇಶ್

ಗುಜರಾತ್​​ : ಏರ್ ಇಂಡಿಯಾ ವಿಮಾನ ದುರಂತದಲ್ಲಿ ಪವಾಡಸದೃಶವಾಗಿ ಸಾವಿನ ದವಡೆಯಿಂದ ಪಾರಾದ 40 ವರ್ಷದ ಬ್ರಿಟಿಷ್ ಪ್ರಜೆ ರಮೇಶ್​ ವಿಶ್ವಾಸ್ ಕುಮಾರ್, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಮಾನ ಅಪಘಾತದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಅಪಘಾತ ನನ್ನ ಕಣ್ಣೆದುರೇ ನಡೆಯಿತು. ನಾನು ಹೇಗೆ ಜೀವಂತವಾಗಿ ಹೊರಬಂದೆ ಎಂದು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಆ ಕ್ಷಣದಲ್ಲಿ ನಾನು ಸಹ ಸಾಯುತ್ತೇನೆ ಎಂದು ಭಾವಿಸಿದ್ದೆ, ಆದರೆ ನಾನು ಕಣ್ಣು ತೆರೆದಾಗ, ಅವಶೇಷಗಳಡಿ ಸಿಲುಕಿದ್ದೆ. ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ನಾನು ಭಯದಿಂದ ನಿಧಾನವಾಗಿ ಅಲ್ಲಿಂದ ಹೊರಬಂದೆ" ಎಂದು ಕರಾಳ ಘಟನೆಯ ಬಗ್ಗೆ ವಿವರಿಸಿದ್ದಾರೆ.

"ವಿಮಾನ ಟೇಕ್ ಆಫ್ ಆದ 10 ಸೆಕೆಂಡುಗಳ ನಂತರ ವಿಮಾನ ಗಾಳಿಯಲ್ಲಿ ನಿಂತಂತೆ ಅನುಭವವಾಯಿತು. ವಿಮಾನದ ಒಳಗೆ ಹಸಿರು ಮತ್ತು ಬಿಳಿ ದೀಪಗಳು ಬೆಳಗಿದವು. ಬಳಿಕ ವಿಮಾನ ಕಟ್ಟಡಕ್ಕೆ ಅಪ್ಪಳಿಸಿತು. ನಾನು ಹೇಗೋ ನನ್ನ ಸೀಟ್ ಬೆಲ್ಟ್ ಬಿಚ್ಚಿ ಹೊರಬಂದೆ. ಆದರೆ ಇತರರಿಗೆ ಬರಲು ಸಾಧ್ಯವಾಗಲಿಲ್ಲ. ಅಪಘಾತದ ಸ್ಥಳದಿಂದ ನಡೆದುಕೊಂಡು ಬಂದ ನನ್ನನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ವಿಮಾನದಲ್ಲಿ ನನ್ನ ಸಹೋದರ ಬೇರೆ ಸಾಲಿನಲ್ಲಿ ಕುಳಿತಿದ್ದ, ಸದ್ಯ ಅವರ ಗುರುತು ಪತ್ತೆಯಾಗುತ್ತಿಲ್ಲ" ಎಂದು ಅವರು ಇದೇ ವೇಳೆ ಅಳಲು ತೋಡಿಕೊಂಡರು.

ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಸಿವಿಲ್​ ಆಸ್ಪತ್ರೆಗೆ ಭೇಟಿ ನೀಡಿ, ಅಪಘಾತದಲ್ಲಿ ಗಾಯಗೊಂಡ ರಮೇಶ್​ ವಿಶ್ವಾಸ್​ ಕುಮಾರ್ ಮತ್ತು ಇತರರ ಯೋಗಕ್ಷೇಮ ವಿಚಾರಿಸಿದರು. ನಿನ್ನೆ ಮಧ್ಯಾಹ್ನ 1:38 ರ ವೇಳೆಗೆ ಲಂಡನ್​​ ಗೆ ತೆರಳುತ್ತಿದ್ದ ಏರ್​ ಇಂಡಿಯಾದ AI 171 ವಿಮಾನ ಟೇಕ್​ ಅಫ್​ ಆದ ಕೆಲ ಸೆಕೆಂಡುಗಳಲ್ಲಿ ಪತನಗೊಂಡಿತ್ತು. ರಮೇಶ್​ ಹೊರತುಪಡಿಸಿ ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ.

Category
ಕರಾವಳಿ ತರಂಗಿಣಿ