ಜೇರುಸೆಲಂ: ಅಮೆರಿಕದ ಜೊತೆಗಿನ ಪರಮಾಣು ಒಪ್ಪಂದಗಳ ಮಾತುಕತೆ ವಿಫಲವಾದ ಬೆನ್ನಲ್ಲೇ ಇರಾನ್ ರಾಜಧಾನಿಯನ್ನು ಗುರಿಯಾಗಿಸಿ ಇಸ್ರೇಲ್ ವೈಮಾನಿಕ ದಾಳಿ ಮಾಡಿದೆ. ಈ ದಾಳಿಯಲ್ಲಿ ಇರಾನ್ ಸಶಸ್ತ್ರ ಪಡೆಗಳ ಮುಖ್ಯಸ್ಥ ಜನರಲ್ ಮೊಹಮ್ಮದ್ ಬಾಘೇರಿ ಸಾವನ್ನಪ್ಪಿದ್ದಾರೆ ಎಂದು ಇರಾನಿ ಸರ್ಕಾರಿ ಟಿವಿ ವರದಿಗಳು ಖಚಿತಪಡಿಸಿವೆ.
ಶುಕ್ರವಾರ ಮುಂಜಾನೆ ಇರಾನ್ ಮೇಲೆ ದಾಳಿಗೆ ಮುಂದಾಗಿದ್ದು, ಇರಾನ್ ಮೇಲೆ 100ಕ್ಕೂ ಹೆಚ್ಚು ಡ್ರೋನ್ ಹಾರಿಸಲಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ದಾಳಿಯಲ್ಲಿ ಪಾರಾಮಿಲಿಟರಿ ರೆವಲ್ಯೂಷನರಿ ಗಾರ್ಡ್ ಜನರಲ್ ಹುಸೇನ್ ಸಲಾಮಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಸಲಾಮಿ ದೇಶದ ಅತ್ಯಂತ ಶಕ್ತಿಶಾಲಿ ಕೇಂದ್ರವೊಂದರ ಮುಖ್ಯಸ್ಥರಾಗಿದ್ದ. ಆರು ವರ್ಷಗಳ ಹಿಂದೆ ಅಧಿಕಾರ ವಹಿಸಿಕೊಂಡ ಸಲಾಮಿ, ಅಮೆರಿಕ ಮತ್ತು ಇಸ್ರೇಲ್ಗೆ ಬೆದರಿಕೆ ಹಾಕಿದ್ದರು.
ಇರಾನ್‌ನ ಪರಮಾಣು ಯೋಜನೆಗಳನ್ನು ವಿಫಲಗೊಳಿಸುವ ಉದ್ದೇಶದಿಂದ ಆಪರೇಷನ್ ರೈಸಿಂಗ್ ಲಯನ್ ಪ್ರಾರಂಭಿಸಲಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದ್ದಾರೆ. ಇರಾನ್‌ನ ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸಿದೆ. ಅದರಲ್ಲಿ ನಟಾಂಜ್‌ನಲ್ಲಿರುವ ಪ್ರಮುಖ ಮೂಲಸೌಕರ್ಯ ನೆಲೆಗಳೂ ಸೇರಿದೆ. ಪರಮಾಣು ವಿಜ್ಞಾನಿಗಳು ಮತ್ತು ಬ್ಯಾಲಿಸ್ಟಿಕ್ ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ. ನಟಾಂಜ್‌ನಲ್ಲಿರುವ ಅದರ ಪ್ರಮುಖ ಮೂಲ ಸೌಕರ್ಯ ತಾಣಗಳ ಮೇಲೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದಿದ್ದಾರೆ.