ನವದೆಹಲಿ: ಕೇವಲ ಆಸ್ತಿಯನ್ನು ನೋಂದಣಿ ಮಾಡಿಸಿದಾಕ್ಷಣ ಆಸ್ತಿಯ ಮಾಲೀಕತ್ವದ ಹಕ್ಕನ್ನು ಸ್ವಯಂಚಾಲಿತವಾಗಿ ನೀಡಲಾಗುವುದಿಲ್ಲ, ಮಾಲೀಕತ್ವವನ್ನು ಸಾಬೀತುಪಡಿಸಲು ಸಂಪೂರ್ಣ ದಾಖಲೆಗಳ ಅಗತ್ಯವಿದೆ ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್ನ ಈ ತೀರ್ಪು ದೇಶಾದ್ಯಂತ ಆಸ್ತಿ ಮಾಲೀಕರು, ಕಾನೂನು ವೃತ್ತಿಪರರು ಮತ್ತು ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಆಸ್ತಿಯ ಮಾಲೀಕತ್ವ ಕೇವಲ ನೋಂದಣಿ ಆಧಾರದ ಮೇಲಷ್ಟೇ ಅವಲಂಬಿತವಾಗುವುದಿಲ್ಲ. ನೋಂದಣಿ ಅಧಿಕಾರಿಯು ಕಾರ್ಯನಿರ್ವಾಹಕ ಅಧಿಕಾರಿಗೆ ಮಾಲೀಕತ್ವ ನಿರ್ಧರಿಸಲು ಹಕ್ಕನ್ನು ಬೆಂಬಲಿಸಬಹುದಾದರೂ, ಅದು ಆಸ್ತಿಯ ಕಾನೂನುಬದ್ಧ ಸ್ವಾಧೀನ ಅಥವಾ ನಿಯಂತ್ರಣಕ್ಕೆ ಸಮನಾಗಿರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅಷ್ಟೇ ಅಲ್ಲ ಕಾನೂನುಬದ್ಧವಾಗಿ ಪಡೆದ ಮಾಲೀಕತ್ವವನ್ನು ಸಾಬೀತುಪಡಿಸಲು ಸಂಪೂರ್ಣ ದಾಖಲೆಗಳ ಅಗತ್ಯವಿದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ.
ಕೆ. ಗೋಪಿ ವರ್ಸಸ್ ಸಬ್-ರಿಜಿಸ್ಟ್ರಾರ್ ಮತ್ತು ಇತರರು (2025) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ಮಹತ್ವದ ಆದೇಶ ನೀಡಿದೆ. ನೋಂದಣಿಗಾಗಿ ಮಾರಾಟ ಪತ್ರವನ್ನು ಪ್ರಸ್ತುತಪಡಿಸಿದರೆ ಸಾಲದು. ಖರೀದಿದಾರರು ಆಸ್ತಿಯ ಮಾಲೀಕತ್ವವನ್ನು ಪಡೆದುಕೊಂಡಿದ್ದಾರೆ ಎಂಬುದನ್ನು ಪ್ರದರ್ಶಿಸಲು ಅಗತ್ಯ ದಾಖಲೆಗಳನ್ನು ಹಾಜರುಪಡಿಸಬೇಕಾಗುತ್ತದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಆಸ್ತಿ ಮಾಲೀಕತ್ವಕ್ಕೆ ಯಾವುದೇ ಹಕ್ಕುಪತ್ರವಿಲ್ಲದ ಭೂಮಿಗೆ ಸಂಬಂಧಿಸಿದಂತೆ ಮಾರಾಟ ಪತ್ರ ಅಥವಾ ಗುತ್ತಿಗೆಯನ್ನು ಹೊಂದಿದರೂ. ಅಗತ್ಯವಾದ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕಗಳನ್ನು ಪಾವತಿಸಿದರೆ ನೋಂದಣಿ ಅಧಿಕಾರಿ ಆಸ್ತಿ ನೋಂದಾಯಿಸಲು ನಿರಾಕರಿಸುವಂತಿಲ್ಲ. ಈ ಹಿಂದೆ, ನೋಂದಣಿ ಎಂದರೆ ಮಾಲೀಕತ್ವ ಎಂದು ನಂಬಲಾಗಿತ್ತು. ಆದರೆ ನೋಂದಣಿ ಒಂದು ಕಾರ್ಯವಿಧಾನದ ಹಂತವಾಗಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಕೆ. ಗೋಪಿ ಪ್ರಕರಣದಲ್ಲಿ, ಸಬ್-ರಿಜಿಸ್ಟ್ರಾರ್‌ನ ಆಡಳಿತಾತ್ಮಕ ಕಾರ್ಯವು 1908 ರ ನೋಂದಣಿ ಕಾಯ್ದೆಯಿಂದ ಕಡ್ಡಾಯವಾದ ಕಾರ್ಯವಿಧಾನದ ಪರಿಶೀಲನೆಗಳನ್ನು ನಡೆಸುವುದಕ್ಕೆ ಸೀಮಿತವಾಗಿದೆ. ಇದು ಮಾಲೀಕತ್ವವನ್ನು ನಿರ್ಣಯಿಸಲು ಬರುವುದಿಲ್ಲ. ಇದು ಅದರ ಅಧಿಕಾರವನ್ನು ಮೀರಿದೆ ಎಂದು ಕೋರ್ಟ್ ತಿಳಿಸಿದೆ.