ನವದೆಹಲಿ: ದೇಶದ ಅತಿದೊಡ್ಡ ಸಂಪರ್ಕ ಜಾಲ ಹೊಂದಿರುವ ರೈಲ್ವೆಯು ತತ್ಕಾಲ್ ಟಿಕೆಟ್ ಬುಕಿಂಗ್ ನಿಯಮದಲ್ಲಿ ಬದಲಾವಣೆ ಮಾಡಿದೆ. IRCTC ಅಧಿಕೃತ ವೆಬ್‌ಸೈಟ್ ಅಥವಾ ಆ್ಯಪ್ಗೆ ಆಧಾರ್ ಲಿಂಕ್ ಆಗಿರುವುದನ್ನು ಕಡ್ಡಾಯ ಮಾಡಿ ಆದೇಶಿಸಿದೆ. ಆಧಾರ್ ಲಿಂಕ್ ಹೊಂದಿರುವ ಬಳಕೆದಾರರು ಮಾತ್ರ ತತ್ಕಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ. ಈ ಆದೇಶ ಜುಲೈ 1 ರಿಂದ ಜಾರಿಯಾಗಲಿದೆ ಎಂದು ರೈಲ್ವೆ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕುರಿತು ಜೂನ್ 10 ರಂದು ಸುತ್ತೋಲೆ ಹೊರಡಿಸಲಾಗಿದ್ದು, ತತ್ಕಾಲ್ ಯೋಜನೆಯ ಪ್ರಯೋಜನಗಳನ್ನು ಸಾಮಾನ್ಯ ಬಳಕೆದಾರರು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯವು ರೈಲ್ವೆಯ ಎಲ್ಲ ವಲಯಗಳಿಗೆ ಮಾಹಿತಿ ನೀಡಿದೆ. 01-07-2025 ರಿಂದ ಜಾರಿಗೆ ಬರುವಂತೆ ತತ್ಕಾಲ್ ಟಿಕೆಟ್‌ಗಳನ್ನು ಆಧಾರ್ ಲಿಂಕ್ ಹೊಂದಿರುವ ಬಳಕೆದಾರರು ಮಾತ್ರ ಐಆರ್ಸಿಟಿಸಿ ವೆಬ್‌ಸೈಟ್ ಅಥವಾ ಅದರ ಆ್ಯಪ್ ಮೂಲಕ ಬುಕ್ ಮಾಡಬಹುದು. ಜುಲೈ 15 ರಿಂದ ತತ್ಕಾಲ್ ಬುಕಿಂಗ್‌ಗಳಿಗೆ ಆಧಾರ್ ಆಧಾರಿತ OTP ದೃಢೀಕರಣ ಕಡ್ಡಾಯಗೊಳಿಸಲಾಗುತ್ತದೆ ಎಂದು ತಿಳಿಸಿದೆ.
ಕಂಪ್ಯೂಟರ್ ಆಧಾರಿತ OTP ಯ ದೃಢೀಕರಣದ ನಂತರವೇ ಭಾರತೀಯ ರೈಲ್ವೆ ಅಥವಾ ಅಧಿಕೃತ ಏಜೆಂಟ್‌ಗಳ ಮೂಲಕ ಬುಕಿಂಗ್ ಮಾಡಲು ತತ್ಕಾಲ್ ಟಿಕೆಟ್‌ಗಳು ಲಭ್ಯವಿರುತ್ತವೆ. ಇದನ್ನು ಬಳಕೆದಾರರು ಬುಕಿಂಗ್ ಸಮಯದಲ್ಲಿ ಒದಗಿಸಿದ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.