ನವದೆಹಲಿ: ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಯಾಣಿಸಲು ಸೂಕ್ತವಲ್ಲದ ಹಳೆಯ ರೈಲು ಒದಗಿಸಿದ್ದಕ್ಕಾಗಿ ಅಲಿಪುರ್ದೂರ್ ವಿಭಾಗದ ನಾಲ್ವರು ಅಧಿಕಾರಿಗಳನ್ನು ರೈಲ್ವೆ ಸಚಿವಾಲಯ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ತ್ರಿಪುರಾದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಕರ್ತವ್ಯಕ್ಕೆ ತೆರಳುತ್ತಿದ್ದ ಬಿಎಸ್‌ಎಫ್ ಸಿಬ್ಬಂದಿಗೆ ಸೂಕ್ತವಲ್ಲದ/ಹಳೆಯ ರೈಲು ನಿಯೋಜಿಸಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಕುರಿತು ಮಾಹಿತಿ ನೀಡಿದ್ದಾರೆ.
"ಈ ಲೋಪಕ್ಕೆ ಸಂಬಂಧಿಸಿದಂತೆ, ಜೂ.11ರಿಂದ ಜಾರಿಗೆ ಬರುವಂತೆ ಅಲಿಪುರ್ದೂರ್ ವಿಭಾಗದ ನಾಲ್ವರು ಅಧಿಕಾರಿಗಳನ್ನು ತಕ್ಷಣ ಅಮಾನತುಗೊಳಿಸಲಾಗಿದೆ" ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಅಮಾನತುಗೊಂಡ ಅಧಿಕಾರಿಗಳಲ್ಲಿ ಅಲಿಪುರ್ದೂರ್‌ನ ಕೋಚಿಂಗ್ ಡಿಪೋ ಅಧಿಕಾರಿ ಮತ್ತು ಅಲಿಪುರ್ದೂರ್ ವಿಭಾಗದ ಮೂವರು ಹಿರಿಯ ಎಂಜಿನಿಯರ್‌ಗಳು ಸೇರಿದ್ದಾರೆ. ಭದ್ರತಾ ಪಡೆಗಳ ಘನತೆ ಮತ್ತು ಸೌಕರ್ಯವು ನಮ್ಮ ಪ್ರಥಮ ಆದ್ಯತೆಯಾಗಿದೆ ಮತ್ತು ಅಂತಹ ನಿರ್ಲಕ್ಷ್ಯವನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ವೈಷ್ಣವ್ ಸ್ಪಷ್ಟಪಡಿಸಿದ್ದಾರೆ. ಈ ಘಟನೆಯ ನಂತರ ರೈಲ್ವೆ ಇಲಾಖೆ ಬಿಎಸ್‌ಎಫ್ ಸಿಬ್ಬಂದಿಗೆ ಹೊಸ ರೈಲಿನ ವ್ಯವಸ್ಥೆ ಮಾಡಿದೆ.
"ವೈರಲ್ ಆಗಿರುವ ವಿಡಿಯೋ ಆಧರಿಸಿ ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ನಿನ್ನೆ ಬೋಗಿಗಳನ್ನು ಸಹ ಬದಲಾಯಿಸಲಾಗಿದೆ. ಇದಕ್ಕೆ ಕಾರಣರಾದ ನಾಲ್ವರು ಅಧಿಕಾರಿಗಳನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ" ಎಂದು ವೈಷ್ಣವ್ ಮಾಧ್ಯಮ ಪ್ರತಿನಿಧಿಗಳಿಗೆ ನೀಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಿಎಸ್‌ಎಫ್ ಸಿಬ್ಬಂದಿಗೆ ಮಾತ್ರ ಅಗರ್ತಲಾದಿಂದ ವಿಶೇಷ ರೈಲನ್ನು ವ್ಯವಸ್ಥೆ ಮಾಡಲಾಗಿದ್ದು, ಅವರ ಅನುಕೂಲಕ್ಕಾಗಿ ಸಂಪೂರ್ಣ ಗಮನ ಹರಿಸಲಾಗಿದೆ. ರೈಲ್ವೆ ಸಚಿವಾಲಯವು ಇಡೀ ಘಟನೆಯ ಬಗ್ಗೆ ವಿವರವಾದ ತನಿಖೆಗೆ ಆದೇಶಿಸಿದೆ. ಭವಿಷ್ಯದಲ್ಲಿ ಇಂತಹ ಲೋಪಗಳು ಮರುಕಳಿಸದಂತೆ ನೋಡಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.